ಮಂಡ್ಯ: ಜಿಲ್ಲೆಯ ಮಳವಳ್ಳಿ ಪಟ್ಟಣದ ಮನೆಯೊಂದರ ಮಾಲೀಕ ಬಾಡಿಗೆದಾರರಿಗೆ ಮನೆ ಖಾಲಿ ಮಾಡಿ ಎಂದು ಎಷ್ಟೇ ಹೇಳಿದರೂ ಸಹ ಮನೆ ಖಾಲಿ ಮಾಡಿರಲಿಲ್ಲ. ಆ ಮಾಲೀಕನಿಗೆ ಮಳೆ ವರದಾನವಾಗಿ ಮನೆ ಗೋಡೆ ಕುಸಿದು ಬಿದ್ದಿದೆ.
ಈ ವೇಳೆ ಮನೆ ಒಳಭಾಗಕ್ಕೆ ಹೋಗಿ ನೋಡಿದಾಗ ಮನೆ ಮಾಲೀಕನಿಗೆ ಆಘಾತ ಕಾದಿತ್ತು. ಮನೆ ಬಾಡಿಗೆ ಕೊಡುವ ಮುನ್ನ ಬಾಡಿಗೆದಾರನ ಹಿನ್ನೆಲೆಯನ್ನು ಮಾಲೀಕನಾದವರು ವಿಚಾರಿಸಿಕೊಳ್ಳುತ್ತಾರೆ. ಒಂದು ವೇಳೆ ಹಿನ್ನೆಲೆ ವಿಚಾರಿಸಿಕೊಳ್ಳದೆ ಇದ್ರೆ ಆಗಬಾರದ್ದು ಆಗುತ್ತೆ ಎನ್ನುವುದಕ್ಕೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ.
ಮಳವಳ್ಳಿ ಪಟ್ಟಣದ ಕೋಟೆ ಬೀದಿಯ ಪವಿತ್ರರಾಜ್ ತಮ್ಮ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದ ಮನೆಯನ್ನು ತಸ್ಲೀಮ್ ಹಾಗೂ ಅವರ ಐವರು ಗಂಡು ಮಕ್ಕಳಿಗೆ ಬಾಡಿಗೆ ನೀಡಿದ್ದರು. ಅದ್ಯಾಕೋ ಏನು ಅನ್ನಿಸಿತೋ ಗೊತ್ತಿಲ್ಲ, ಬಾಡಿಗೆ ಕೊಟ್ಟು 1 ವರ್ಷವಾದ ಬಳಿಕ ಪವಿತ್ರರಾಜ್ ಮನೆ ಖಾಲಿ ಮಾಡುವಂತೆ ತಸ್ಲೀಮ್ ಹಾಗೂ ಅವರ ಮಕ್ಕಳಿಗೆ 2 ತಿಂಗಳಿನಿಂದ ಒತ್ತಾಯ ಮಾಡಿದ್ದಾರೆ.
ಆದರೆ, ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬಾಡಿಗೆದಾರರು ಮನೆ ಖಾಲಿ ಮಾಡಿರಲಿಲ್ಲ. ಆದರೆ, ಕಳೆದ 3 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆ ಮನೆಯ ಗೋಡೆ ಕುಸಿದು ಬಿದ್ದಿದೆ. ಹೀಗಾಗಿ, ಮನೆಯ ಒಳಭಾಗಕ್ಕೆ ಹೋಗಿ ಪವಿತ್ರರಾಜ್ ನೋಡಿದಾಗ ಅವರಿಗೆ 12 ಅಡಿಯ ಸುರಂಗ, ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳು ಕಂಡುಬಂದಿವೆ.
ಮನೆಯ ನಾಲ್ವರು ಪರಾರಿ: ಪವಿತ್ರರಾಜ್ ಬಾಡಿಗೆ ನೀಡಿದ್ದ ಮನೆಯ ಸ್ನಾನಗೃಹದ ಬಳಿ 12 ಅಡಿಯ ಸುರಂಗ, ಮಾರಕಾಸ್ತ್ರ ಹಾಗೂ ಮಾದಕ ವಸ್ತುಗಳನ್ನು ನೋಡಿ ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಬಳಿಕ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದಾಗ ಮನೆಯಲ್ಲಿದ್ದ ಮಾದಕ ವಸ್ತು, ಮಾರಕಾಸ್ತ್ರಗಳೊಂದಿಗೆ ಮನೆಯಲ್ಲಿದ್ದ ನಾಲ್ವರು ಮಕ್ಕಳು ತಮ್ಮ ತಾಯಿ ತಸ್ಲೀಮ್‌ರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಬಾಡಿಗೆ ಮನೆಯಲ್ಲಿ ಮಾದಕ ವಸ್ತು ಪತ್ತೆ: 'ಬಾಡಿಗೆ ಕೊಟ್ಟಿದ್ದ ಮನೆಯ ಬಳಿಗೆ ಯಾವುದೋ ಕಾರ್ಯನಿಮಿತ್ತ ಬಂದಾಗ ಬೀಗ ಒಡೆದುಹಾಕಲಾಗಿತ್ತು. ಇದೇಕೆ ಬಾಗಿಲು ಒಡೆದುಹಾಕಲಾಗಿದೆ ಎಂದು ಚೆಕ್ ಮಾಡಬೇಕಾದ್ರೆ 6 ರಿಂದ 7 ಅಡಿ ಗುಂಡಿ ತೆಗೆದು ಅದರೊಳಗೆ ಮಾರಕಾಸ್ತ್ರಗಳನ್ನು ಇಡಲಾಗಿತ್ತು. ನಂತರ ಮನೆ ಮುಂದೆ ಬಂದಾಗ ಅಲ್ಲಿ ಮಾದಕ ವಸ್ತುಗಳು ಇದ್ದವು. ಅದನ್ನು ನೋಡಿದಾಗ ಸ್ವಲ್ಪ ಶಾಕ್ ಆಯ್ತು. ಮತ್ತೆ ಪರಿಶೀಲನೆ ಮಾಡಿದಾಗ ನಾಲ್ಕು ಹೊಸ ಲಾಂಗ್ಗಳು ಹಾಗೂ ಒಂದು ಹಳೆ ಲಾಂಗ್ ಸಿಕ್ಕಿವೆಯಂತೆ. ಅದನ್ನು ನೋಡಿದಾಗ ಆಘಾತವಾಗಿ ನಮ್ಮ ಪಕ್ಕದ ಮನೆಯ ನಂದೀಶನನ್ನು ಕರೆದುಕೊಂಡು ಬಂದೆ.
ಅವನು ಕೂಡಾ ಸ್ಟೇಷನ್ಗೆ ಹೋಗಿ ಕಂಪ್ಲೆಂಟ್ ಕೊಡಿ ಅಂದ. ನಂತರ ಅದನ್ನು ಎತ್ತಿಕೊಂಡು ಬಂದು ಅವರ ಮನೆ ಮುಂದಿಟ್ಟು ಏನಿದು ಅಂತ ಕೇಳ್ದೆ. ಅದಕ್ಕೆ ಅವನು ಇದು ನಂದಲ್ಲ ಎಂದ. ಅದಕ್ಕೆ ನಾನು ಆಯ್ತು ಸರಿ ಯಾರಾದ್ದಾದ್ರು ಆಗಲಿ, ನಾನು ಪೊಲೀಸ್ ಸ್ಟೇಷನ್ಗೆ ಕಂಪ್ಲೇಂಟ್ ಕೊಡುತ್ತೇನೆ. ಅವರು ಬಂದು ಎನ್ಕ್ವೈರಿ ಮಾಡುತ್ತಾರೆ ಎಂದು ಹೇಳಿ ಬರುವಾಗ ಯಾರೋ ಮೂರು ಜನ ಬಂದು ಲಾಂಗ್ನ್ನು ಎತ್ತಿಕೊಂಡು ಹೋಗಿದ್ದಾರಂತೆ. ಯಾರು ಅಂತ ಗೊತ್ತಿಲ್ಲ. ಆದ್ರೆ ನಮ್ಮ ಅಕ್ಕಪಕ್ಕದ ಮನೆಯವರು ಅವರನ್ನು ನೋಡಿದ್ದಾರೆ' ಅಂತಾರೆ ಮನೆ ಮಾಲೀಕ ಚಂದ್ರು.
ಭಯದ ವಾತಾವರಣ ನಿರ್ಮಾಣ : ಮನೆಯಲ್ಲಿ 12 ಅಡಿ ಸುರಂಗ ಮಾಡಿ, ಅದರಲ್ಲಿ ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಶೇಖರಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ಪರಾರಿಯಾಗಿರುವವರು ಮನೆಯ ಬಳಿ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ. ಆಗಾಗ ಗಲಾಟೆಗಳನ್ನು ಮಾಡುತ್ತಿದ್ದರು. ನಮಗೆ ಅವರು ಇರುವವರೆಗೆ ಭಯದ ವಾತಾವರಣ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಮಳವಳ್ಳಿ ಪೊಲೀಸರಿಂದ ಶೋಧ ಕಾರ್ಯ : ಒಟ್ಟಾರೆ ಬಾಡಿಗೆ ಮನೆಯೊಂದರಲ್ಲಿ ಈ ರೀತಿ ಸುರಂಗ ಕೊರೆದು ಮಾದಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಶೇಖರಣೆ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದೀಗ ಪರಾರಿಯಾಗಿರುವ ನಾಲ್ವರ ಶೋಧ ಕಾರ್ಯಕ್ಕೆ ಮಳವಳ್ಳಿ ಪೊಲೀಸರು ಮುಂದಾಗಿದ್ದಾರೆ.
ಓದಿ: ಹೆಸರು ಮತ್ತು ಉದ್ದು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ.. ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ