ಮಂಡ್ಯ : ಬಿಜೆಪಿ ಸರ್ಕಾರ ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸದಿದ್ದರೆ ಮುಂದೆ ಕಾಂಗ್ರೆಸ್ ಸರ್ಕಾರ ಬರಲಿದ್ದು, ನಾವೇ ನಡೆಸುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಲು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ನಡೆಯುತ್ತಿರುವ 28ನೇ ದಿನದ ಮೈಶುಗರ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಾವೇ ಒಂದು ತಿಂಗಳಲ್ಲಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ರೈತಪರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಭರವಸೆ ನೀಡಿದರು.
ಮೈಶುಗರ್ ಕಾರ್ಖಾನೆ ಸ್ವಾತಂತ್ರ್ಯಪೂರ್ವದಲ್ಲಿಯೇ ಆರಂಭವಾಗಿತ್ತು : ಮೈಶುಗರ್ ಕಾರ್ಖಾನೆ ಸ್ವಾತಂತ್ರ್ಯಪೂರ್ವ ಅಂದ್ರೇ 1933ರಲ್ಲಿ ಆರಂಭವಾಗಿದೆ. ಕಾರ್ಖಾನೆ ಹಾಗೂ ಮಂಡ್ಯ ಜಿಲ್ಲೆಯ ಜನರ ನಡುವೆ ಅವಿನಾಭಾವ ಸಂಬಂಧವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರಿಗೆ ಅನುಕೂಲವಾಗಲೆಂದು ಕಾರ್ಖಾನೆ ಆರಂಭಿಸಿದ್ದರು. ಇದೊಂದು ಜಿಲ್ಲೆಗೆ ಪ್ರತಿಷ್ಠಿತ ಕಂಪನಿಯಾಗಿದೆ. ಲಾಭದಾಯಕವಾಗಿ ನಡೆದಿದ್ದು, ನಷ್ಟಕ್ಕೆ ಸರ್ಕಾರವೇ ಹೊಣೆಯಾಗಿದೆ. ಆದರೆ, ಯಾವುದೇ ಕಾರಣಕ್ಕೂ ರೈತರು ನಷ್ಟವಾಗುವುದಕ್ಕೆ ಕಾರಣರಲ್ಲ ಎಂದರು.
ರಾಜ್ಯದಲ್ಲಿ ಸಾಕಷ್ಟು ಕಾರ್ಖಾನೆಗಳು ನಷ್ಟದಲ್ಲಿವೆ : ರಾಜ್ಯದಲ್ಲಿ ಸಾಕಷ್ಟು ಕಾರ್ಖಾನೆಗಳು ನಷ್ಟದಲ್ಲಿವೆ ಎಂದು ಮಾರಾಟ ಮಾಡಲು ಸಾಧ್ಯವಿಲ್ಲ. ಎಲ್ಲವನ್ನು ಪುನಶ್ಚೇತನ ಮಾಡಲು ಸರ್ಕಾರಕ್ಕೆ ಸಾಧ್ಯವಿದೆ. ಕಾರ್ಖಾನೆಯೂ ಯಾಕೆ ನಷ್ಟ ಅನುಭವಿಸಿದೆ. ಏನಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ಚಿಕಿತ್ಸೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಬೇಕು ಎಂದು ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಸಲಾಗಿದೆ. ಇದಕ್ಕೆ ಸರ್ಕಾರವೇ ಉತ್ತರ ಕೊಡಬೇಕು ಎಂದರು.
ಅಸೆಂಬ್ಲಿಯಲ್ಲಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ : ವಿಧಾನಸಭೆಯಲ್ಲಿ ಶಾಸಕರಾದ ಅನ್ನದಾನಿ, ಸುರೇಶ್‌ಗೌಡ, ತಮ್ಮಣ್ಣ ಮಾತನಾಡಿದ್ದಾರೆ. ಅದಕ್ಕೆ ಸ್ಪೀಕರ್ ಬಳಿ ಅರ್ಧಗಂಟೆ ಸಮಯಾವಕಾಶ ಕೇಳಿದ್ದೆ. ಆದರೆ, ಇದರ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಆದರೂ ಸರ್ಕಾರ ಹುಚ್ಚು ಸಾಹಸಕ್ಕೆ ಕೈಹಾಕುವುದನ್ನು ನಿಲ್ಲಿಸಬೇಕು.
ಸರ್ಕಾರದ ನೀತಿಗಳಿಂದಲೇ ಕಾರ್ಖಾನೆ ನಷ್ಟವಾಗಿದೆ. ಅನುಭವವಿರುವ ವ್ಯವಸ್ಥಾಪಕ ನಿರ್ದೇಶಕರನ್ನು ಹಾಕುವ ಬದಲು ಬೇಕಾಬಿಟ್ಟಿಯಾಗಿ ಗೊತ್ತಿಲ್ಲದವರನ್ನು ನೇಮಿಸಲಾಗುತ್ತಿದೆ. ಜವಾಬ್ದಾರಿಯುತ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿಲ್ಲ. ಇದು ಸಹ ಕಾರ್ಖಾನೆ ನಷ್ಟಕ್ಕೆ ಕಾರಣ ಎಂದರು.
ಸರ್ಕಾರ 145 ಕೋಟಿ ರೂ. ಅನುದಾನ ನೀಡಿತ್ತು : ನಮ್ಮ ಸರ್ಕಾರ ಮೈಶುಗರ್‌ಗೆ 145 ಕೋಟಿ ರೂ. ಅನುದಾನ ನೀಡಿತ್ತಲ್ಲದೇ, ಸರ್ಕಾರವೇ ನಡೆಸಿತ್ತು. ಆದರೆ, ಪ್ರಸ್ತುತ ಇರುವ ಸರ್ಕಾರ ಯಾಕೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಕಾರ್ಖಾನೆಯು ಆದಾಯದ ಮೂಲದಲ್ಲಿದೆ. 235 ಎಕರೆ ಸೇರಿದಂತೆ ಬೆಂಗಳೂರಿನಲ್ಲಿಯೂ ಆಸ್ತಿ ಹೊಂದಿದೆ. ಸಾಕಷ್ಟು ಆದಾಯದ ಮೂಲಗಳಿವೆ. ಅದನ್ನು ಸರಿಯಾಗಿ ಬಳಸುತ್ತಿಲ್ಲ. ಖಾಸಗಿಯವರಿಗೆ ಕಾರ್ಖಾನೆ ನಡೆಸುವ ಸಾಮರ್ಥ್ಯವಿದೆ. ಆದರೆ, ಸರ್ಕಾರಕ್ಕೆ ನಡೆಸಲು ಸಾಮರ್ಥ್ಯವಿಲ್ಲವೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಮಗ ಬಿ ಎಸ್ ಯಡಿಯೂರಪ್ಪ ಕೈಎತ್ತಿದ್ದಾರೆ : ಈಗಿನ ಸರ್ಕಾರಕ್ಕೆ ಕಾರ್ಖಾನೆ ಆರಂಭಿಸುವ ಮನಸ್ಸಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಇದೇ ಜಿಲ್ಲೆಯ ಮಗ. ಇವರು ನಡೆಸುತ್ತಾರೆ ಎಂದು ನಂಬಿದ್ದೆ. ಆದರೆ, ಅವರು ಕೈ ಎತ್ತಿದರು. ಅದೇಕೋ ಅವರು ಸಹ ಪ್ರಾರಂಭಿಸಲಿಲ್ಲ. ಮುರುಗೇಶ್ ನಿರಾಣಿಗೆ ಪಿಎಸ್‌ಎಸ್‌ಕೆ ಕಾರ್ಖಾನೆ ಗುತ್ತಿಗೆ ನೀಡುತ್ತಾರೆ. ಮೈಶುಗರ್ ಕಾರ್ಖಾನೆಯನ್ನು ತೆಗೆದುಕೊಳ್ಳಲು ಮುಂದಾಗಿದ್ದರು.
ಅದನ್ನು ತಡೆಯಲಾಗಿದೆ. ರೋಗಗ್ರಸ್ತ ಎಂಬ ಹಣೆಪಟ್ಟಿ ಕಟ್ಟಿ ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರವೇ ಅದಕ್ಕೆ ಪುನಶ್ಚೇತನಗೊಳಿಸುವ ಜವಾಬ್ದಾರಿ ಇದೆ. ಸರ್ಕಾರಕ್ಕೆ ಬಡತನ ಬಂದಿಲ್ಲ. 2.50 ಲಕ್ಷ ಕೋಟಿ ರೂ. ಬಜೆಟ್ ಮಂಡಿಸುವ ಸರ್ಕಾರಕ್ಕೆ 400 ಕೋಟಿ ರೂ. ಹೆಚ್ಚಲ್ಲ ಎಂದರು.
ನಿಮ್ಮ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ನೀವು ಧರಣಿ ಮಾಡುವುದನ್ನು ನಿಲ್ಲಿಸಬೇಕು. ಕಾರ್ಖಾನೆಯನ್ನು ಖಾಸಗೀಕರಣ ಮಾಡದಂತೆ ಒತ್ತಾಯ ಮಾಡುತ್ತೇವೆ. ನನ್ನ ಸಂಪೂರ್ಣ ಬೆಂಬಲ ನಿಮಗಿದೆ ಎಂದು ತಿಳಿಸಿದರು.