ಮಂಡ್ಯ: ನಗರದಲ್ಲಿ ಸ್ವಚ್ಛತೆಯೂ ಇಲ್ಲ, ಶೌಚಾಲವೂ ಇಲ್ಲ, ಇರೋ ಶೌಚಾಲಯ ಉಪಯೋಗಕ್ಕೂ ಬರುತ್ತಿಲ್ಲ. ನಗರದ ಸ್ವಚ್ಛತೆ ಅಷ್ಟಕ್ಕೆ ಅಷ್ಟೇ ಆದರೂ, ಜನರ ಉಪಯೋಗಕ್ಕೆ ನಗರಸಭೆ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ ನಿರ್ಮಾಣ ಮಾಡಿರೋ ಶೌಚಾಲಯಗಳಲ್ಲಿ 5ಕ್ಕೂ ಹೆಚ್ಚು ಶೌಚಾಲಯಗಳು ಉಪಯೋಗಕ್ಕೆ ಬಾರದೇ ಹೋಗಿವೆ. ತಕ್ಕ ಯೋಜನೆ ಇಲ್ಲದೆ ಕಟ್ಟಿದ ಈ ಶೌಚಾಲಯಗಳು ಪಾಳು ಬಿದ್ದಿವೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟದ ಜೊತೆಗೆ ಸ್ವಚ್ಛತೆ ಪಟ್ಟಿಯ ಅಂಕದಿಂದಲೂ ಹೊರಕ್ಕೆ ಹೋಗುತ್ತಿದೆ ಎಂದು ನಾಗರಿಕಾರದ ರವೀಂದ್ರ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಗರ ಸಭೆ ಉಪಯೋಗಕ್ಕೆ ಬಾರದ ಶೌಚಾಲಗಳ ಪಟ್ಟಿಯನ್ನು ಈಗಾಗಲೇ ತಯಾರಿಸುತ್ತಿದ್ದೇವೆ ಮತ್ತು ಯಾವ ಕಾರಣಕ್ಕೆ ಉಪಯೋಗಿಸುತ್ತಿಲ್ಲ ಎಂಬದನ್ನು ಕಂಡು ಹಿಡಿದು ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಹಾಗೂ ಸ್ವಚ್ಚ ಸರ್ವೇಕ್ಷಣೆಯಲ್ಲಿ ಮುಂದೆ ಬರಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಲೋಕೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಮನೆಯ ಬಳಿಯ ಶೌಚಾಲಯ, ಡಿಎಆರ್ ಮೈದಾನದ ಬಳಿಯ ಶೌಚಾಲಯ, ತಾವರಗೆರೆ, ಗುತ್ತಲು ಸೇರಿದಂತೆ ಐದು ಕಡೆಗಳಲ್ಲಿ ಶೌಚಾಲಯಗಳು ಉಪಯೋಗಕ್ಕೆ ಬಾರದ ರೀತಿಯಲ್ಲಿ ಪಾಳು ಬಿದ್ದಿವೆ. ಕಟ್ಟಿ ವರ್ಷವಾದರೂ ಅವೈಜ್ಞಾನಿಕ ಯೋಜನೆಯಿಂದ ಪ್ರಯೋಜನಕ್ಕೆ ಬಾರದಾಗಿವೆ. ಜನ ಸಂದಣಿಯೇ ಇಲ್ಲದ ಕಡೆ ಈ ಶೌಚಾಲಯಗಳು ನಿರ್ಮಾಣವಾಗಿದ್ದು, ಆರ್ಥಿಕ ನಷ್ಟಕ್ಕೂ ಕಾರಣವಾಗಿವೆ.