ಮಂಡ್ಯ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಮೃತಪಟ್ಟ ಭೀಕರ ಘಟನೆ ಮಂಡ್ಯ ರೈಲ್ವೆ ನಿಲ್ದಾಣದ ಬಳಿ ಇಂದು (ಬುಧವಾರ) ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್‌ಪ್ರೆಸ್ ಮಂಡ್ಯ ನಿಲ್ದಾಣ ಸಮಿಪಿಸುತ್ತಿದ್ದಂತೆ ರೈಲು ಬರುತ್ತಿರುವುದನ್ನು ಗಮನಿಸದ ಇಬ್ಬರು ಮಹಿಳೆಯರು ರೈಲ್ವೆ ಹಳಿ ದಾಟುತ್ತಿದ್ದರು. ಈ ವೇಳೆ, ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಒಬ್ಬ ಮಹಿಳೆ ಗುರುತು ಪತ್ತೆಯಾಗಿದೆ. ಮಂಡ್ಯ ತಾಲೂಕಿನ ಬಸರಾಳು ಸಮೀಪದ ಹುರುಳಿ ಜವರನಕೊಪ್ಪಲು ಮೂಲದ ಶಶಿ ಮೃತ ಮಹಿಳೆ. ಇನ್ನೊಬ್ಬ ಮಹಿಳೆಯ ಮುಖ, ರೈಲು ಗುದ್ದಿದ ರಭಸಕ್ಕೆ ನಜ್ಜು ಗುಜ್ಜಾಗಿದ್ದು, ಮಹಿಳೆಯ ಗುರುತು ಪತ್ತೆಗಾಗಿ ಪ್ರಯತ್ನ ಮಾಡಲಾಗುತ್ತಿದೆ.
ಪ್ರತ್ಯಕ್ಷದರ್ಶಿ ಹೇಳಿದಿಷ್ಟು: "ಇಂದು ಬೆಳಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕಾಚಿಗುಡ ಎಕ್ಸ್‌ಪ್ರೆಸ್ ರೈಲಿನಿಂದ ಮಹಿಳೆಯರಿಬ್ಬರು ಇಳಿದಿದ್ದಾರೆ. ನಂತರ ತಾವು ಪ್ಲಾಟ್‌ಫಾರಂನಲ್ಲಿ ಹತ್ತಿಕೊಂಡು ಹೋಗಲಾಗದೇ ರೈಲು ಹಳಿಯ ಮೇಲೆ ಇಳಿದು ಮತ್ತೊಂದು ಪ್ಲಾಟ್‌ಫಾರಂಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ, ಹಳಿ ದಾಟುವಾಗ ಮೈಸೂರಿನಿಂದ - ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲು ಮಹಿಳೆಯರಿಗೆ ಗುದ್ದಿದೆ" ಎಂದು ಪ್ರತ್ಯಕ್ಷದರ್ಶಿ ರೇಣುಕಾ ಎಂಬುವವರು ಹೇಳಿದ್ದಾರೆ.
ಇದನ್ನೂ ಓದಿ: ರೈಲು ಹಳಿ ಮೇಲೆ ಒಂದೇ ಕುಟುಂಬದ ಮೂವರ ಶವ ಪತ್ತೆ
ಸಂಬಂಧಿಯ ಗೋಳಾಟ: ರೈಲಿಗೆ ಸಿಲುಕಿ ಮಹಿಳೆಯರ ದುರ್ಮರಣ ವಿಷಯ ತಿಳಿಯುತ್ತಿದ್ದಂತೆ ಮೃತ ಮಹಿಳೆ ಶವದ ಮುಂದೆ ಸಂಬಂಧಿ ಗೋಳಾಟ ನಡೆಸಿದ್ದಾರೆ. ಮೃತ ಮಹಿಳೆಯರಲ್ಲಿ ಒಬ್ಬರು ಬಸರಾಳು ಸಮೀಪದ ಹುರುಳಿ ಜವರನಕೊಪ್ಪಲು ಮೂಲದ ಶಶಿ ಆಗಿದ್ದು, ತನ್ನ ಅಣ್ಣನ ಮಗಳನ್ನ ಕಳೆದುಕೊಂಡ ಮಹಿಳೆ ಸೌಭಾಗ್ಯ ಗೋಳಾಡುತ್ತಿದ್ದರು. "ಶಶಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇಂದು ಬೆಂಗಳೂರಿನಿಂದ ಹುರುಳಿ ಜವರನಕೊಪ್ಪಲು ಗ್ರಾಮಕ್ಕೆ ಹೋಗಲು ರೈಲಿನಿಂದ ಮಂಡ್ಯಕ್ಕೆ ಬಂದಿದ್ದಾರೆ. ಈ ವೇಳೆ, ರೈಲ್ವೆ ಹಳಿಯನ್ನು ದಾಟುವಾಗ ಅವಘಡ ಜರುಗಿದೆ" ಎಂದು ಮೃತ ಮಹಿಳೆ ಶಶಿ ಸಂಬಂಧಿ ಸೌಭಾಗ್ಯ ಕಣ್ಣೀರಿಟ್ಟಿದ್ದಾರೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಡ್ಯ ರೈಲು ನಿಲ್ದಾಣದ ಬಳಿ ಘಟನೆ ನಡೆದಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೈಲಿಗೆ ಸಿಲುಕಿ ಮೂವರು ಸಾವು: ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಭಾವಿ ರೈಲ್ವೆ ನಿಲ್ದಾಣದ ಸಮೀಪ ಹಳಿ ಮೇಲೆ ಛಿದ್ರಗೊಂಡ ರೀತಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದವು. ಮೃತರನ್ನು ತೊಂಡೆಭಾವಿ ಗ್ರಾಮದ ನಿವಾಸಿ ಮೈಲಾರಪ್ಪ (50), ಆತನ ಪತ್ನಿ ಪುಷ್ಪಲತಾ (45) ಮತ್ತು ಹಿರಿಯ ಮಗಳು ಮಮತಾ (25) ಮೃತರು ಎಂದು ಗುರುತಿಸಲಾಗಿತ್ತು. ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮೂವರ ಸಾವು ಪ್ರಕರಣ.. ನಮ್ಮ ಅಪ್ಪ, ಅಮ್ಮ, ಅಕ್ಕ ಎಂದು ಗುರುತಿಸಿದ ಸಹೋದರಿ