ಮಂಡ್ಯ: ಕಳೆದ 15 ದಿನಗಳಿಂದ ಕೊಡಗಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಸಾಕಷ್ಟು ನೀರು ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿದೆ. ಜಲಾಶಯ ಭರ್ತಿಯಾಗಲು ಕೇವಲ 1 ಅಡಿಗಳಷ್ಟು ಬಾಕಿ ಇದೆ.
ಕಳೆದ ವಾರದಿಂದ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯದ ನೀರಿನ ಮಟ್ಟ ಮತ್ತೆ 123 ಅಡಿಗೆ ಏರಿಕೆ ಕಂಡಿದೆ. ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಲು ಈಗಾಗಲೇ ಕಾವೇರಿ ನೀರಾವರಿ ಇಲಾಖೆಯಿಂದ ಸಿದ್ಧತೆ ಕಾರ್ಯಗಳು ನಡೆದಿದ್ದು, ಬಾಗಿನ ಕಾರ್ಯಕ್ಕೆ ದಿನಾಂಕ ನಿಗದಿ ಮಾಡುವ ಮುನ್ಸೂಚನೆಗಳಿವೆ.
ಬಾಗಿನಕ್ಕೆ ಸಕಲ ಸಿದ್ಧತೆ
ಕಳೆದ ವಾರದಿಂದ ಜಲಾಶಯಕ್ಕೆ ಪ್ರತಿ ದಿನ 16 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದ್ದು, ಹೀಗೆ ಮುಂದುವರಿದರೆ ಮುಂದಿನ ವಾರದಲ್ಲಿ ಗರಿಷ್ಠ ಮಟ್ಟ ತಲುಪಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯ ನಡೆಯಲಿದೆ. ಹಿಂದೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆ ಇದ್ದರೂ, ಹೆಚ್ಚಿನ ನೀರನ್ನು ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ಮೂಲಕ ಹರಿಸಲಾಗಿತ್ತು.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ನೀರನ್ನು ಈ ಬಾರಿ ತಮಿಳುನಾಡಿಗೆ ನೀಡಿದ್ದರಿಂದ ಮುಂಗಾರು ಮಳೆ ಇದ್ದರೂ ಸಂಪೂರ್ಣ ಜಲಾಶಯ ಗರಿಷ್ಠ ಮಟ್ಟಕ್ಕೆ ಭರ್ತಿ ಆಗಿಲ್ಲ.
ಮುಖ್ಯಮಂತ್ರಿಗಳಿಂದ ಈ ಬಾರಿ ಗೌರಿ ಗಣೇಶನ ಹಬ್ಬಕ್ಕಿಂತಲೂ ಮುಂಚಿತವಾಗಿ ಬಾಗಿನ ಪೂಜೆ ಆಗಬೇಕಿತ್ತು. ಆದರೂ ಈ ವರ್ಷದಲ್ಲಿ ಆಯುಧ ಪೂಜೆ ಹಾಗೂ ತಲಕಾವೇರಿ ತೀರ್ಥೋದ್ಭವದ ನಂತರ ಮುಖ್ಯಂತ್ರಿಗಳಿಂದ ಬಾಗಿನ ಅರ್ಪಿಸುವ ಪೂಜೆ ಕಾರ್ಯ ನಡೆಯುವ ಸಾಧ್ಯತೆಗಳಿವೆ. ದಿನಾಂಕ ನಿಗದಿ ಮಾಡುವ ಕಾರ್ಯದಲ್ಲಿ ಅಧಿಕಾರಿಗಳು ಮುಂದಾಗಿದ್ದು, ತಡವಾಗಿಯಾದರೂ ಮುಖ್ಯಮಂತ್ರಿಯಿಂದ ಬಾಗಿನ ಪೂಜೆ ನಡೆಯಲಿದೆ.
ಜಲಾಶಯದ ಒಳ ಹರಿವಿನಲ್ಲಿ ಏರಿಕೆ
ಇದೀಗ ಮತ್ತೇ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿ ನೀರಿನ ಮಟ್ಟ ಏರಿಕೆ ಕಂಡು ಬಂದಿದೆ. ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಇಂದು 123.08 ಅಡಿಗಳಷ್ಟು ತುಂಬಿದೆ. ಜಲಾಶಯ ಒಟ್ಟು 49 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಇದುವರೆಗೆ ಕೊಡಗಿನಲ್ಲಿ ಹೆಚ್ಚು ಮಳೆ ಆಗಿದ್ದರಿಂದ ಜಲಾಶಯಕ್ಕೆ ಸೋಮವಾರ ಬೆಳಗ್ಗೆ 16 ಸಾವಿರ ಕ್ಯುಸೆಕ್ ಹೆಚ್ಚು ನೀರು ಹರಿದು ಬರುತ್ತಿದ್ದು, 04 ಸಾವಿರ ಕ್ಯುಸೆಕ್ ನೀರನ್ನು ಕುಡಿಯಲು ಕಾವೇರಿ ನದಿಗೆ ಹಾಗೂ ಬೆಳೆ ಬೆಳೆಯಲು ನಾಲೆಗಳಿಗೆ ಮೂಲಕ ಹರಿಸಲಾಗುತ್ತಿದೆ.
ಪ್ರಸ್ತುತ ಜಲಾಶಯದ ನೀರಿನ ಮಟ್ಟ: ಪ್ರಸ್ತುತ ಜಲಾಶಯದಲ್ಲಿ 123.08 ಅಡಿ ನೀರಿನ ಮಟ್ಟ ಇದ್ದು, 16,385 ಸಾವಿರ ಕ್ಯೂಸೆಕ್ ಜಲಾಶಯಕ್ಕೆ ಒಳ ಹರಿವಾಗಿದ್ದು, 3,328 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇಲ್ಲಿವರೆಗೆ ಜಲಾಶಯದಲ್ಲಿ 47.322 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಮುರೂವರೆ ಟಿಎಂಸಿ ನೀರು ಜಲಾಶಯಕ್ಕೆ ಬೇಕಿದ್ದು, ಈ ಎರಡು - ಮೂರು ದಿನಗಳಲ್ಲೇ ತುಂಬುವ ನಿರೀಕ್ಷೆಯಿದೆ.