ಮಂಡ್ಯ: ಜನರ ಅನುಕಂಪಕ್ಕಾಗಿ ಮಾಜಿ ಸಚಿವರು ಗಡ್ಡ ಬಿಟ್ಟಿದ್ದಾರೆ ಎಂಬ ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿಕೆಗೆ, ಅವರಿಗೆ ಮಾತನಾಡಲು ಹಕ್ಕಿದೆ. ಶಾಸಕರಿದ್ದಾರೆ ಮಾತನಾಡಲಿ. ನನಗೆ ಬೇಜಾರಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರು ಏನು ಬೇಕಾದರೂ ಮಾತನಾಡಬಹುದು, ಅವರು ದೊಡ್ಡವರಿದ್ದಾರೆ. ಅವರಿಗೆ ಹಿಂತಿರುಗಿ ಮಾತನಾಡುವಷ್ಟು ನಾವು ಬೆಳೆದಿಲ್ಲ ಎಂದರು.
ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ಸ್ವಾತಂತ್ರರಿದ್ದಾರೆ. ಅವರದ್ದು ಪ್ರಾದೇಶಿಕ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲೇ ಕಟ್ಟಿಕೊಂಡಿದ್ದಾರೆ. ಅವರ ತಂದೆ ಮತ್ತು ಅವರೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಇದೆ ಎಂದರು.
ಅವರ ಬಗ್ಗೆ ನಾವು ಕಾಮೆಂಟ್ ಮಾಡುವುದರಲ್ಲಿ ಅರ್ಥವಿಲ್ಲ. ಜನ ಒಂದು ಕಾಲಕ್ಕೆ ತೀರ್ಮಾನ ತೆಗೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಅವರ ತೀರ್ಮಾನದ ಬಗ್ಗೆ ಪ್ರಶ್ನೆ ಮಾಡುವುದು ಸೂಕ್ತವಲ್ಲ ಎಂದರು.
ಎಲ್ಲಿಯವರಗೆ ಈ ತರದಹ ನಿಲುವುಗಳನ್ನು ಮಾಡ್ತಾರೋ ಮಾಡಲಿ. ಟೈಮ್ ಬಂದಾಗ ಜನ ಉತ್ತರ ಕೊಡ್ತಾರೆ. ನಾವು, ದೇವೇಗೌಡರು ಕೋಮುವಾದಿ ಪಕ್ಷದ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ನಾವೆಲ್ಲಾ ಬಿಜೆಪಿಗೆ ಸೇರಿಕೊಂಡು ಮುಖ್ಯಮಂತ್ರಿ ಮಾಡಲು ಹೋರಾಟ ಮಾಡಿದ್ದಾಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಟ ಮಾಡಿದವರು. ಈಗ ಕೋಮುವಾದಿ ಪಕ್ಷದ ಜೊತೆ ಸಂಬಂಧ ಬೆಳೆಸಬೇಡಿ ಎಂದು ಸಲಹೆ ನೀಡಿದರು.