ಮಂಡ್ಯ: ಕಾವೇರಿ ನದಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ನಾಲೆಗಳಿಗೆ ಹರಿಸುವ ಸಾಧ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಪ್ರವಾಹಕ್ಕೆ ಒಳಗಾಗುವ ಆಯಾಯ ಪ್ರದೇಶಗಳ ತಹಶೀಲ್ದಾರರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಗಮನ ಹರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶೈಲಜಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಅತಿವೃಷ್ಟಿ ಹಾಗೂ ನೆರೆಹಾವಳಿ ಸಮಸ್ಯೆಗಳ ನಿರ್ವಹಣಿಯ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂಗಾರು ಮಳೆ ಆರಂಭವಾಗಿದೆ. ಕಾವೇರಿ ನದಿ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ನಾಲೆಗಳಿಗೆ ಹರಿಸುವ ಸಾಧ್ಯತೆ ಇದೆ. ಜತೆಗೆ ಕಾವೇರಿ ನದಿ ತನ್ನ ಇಕ್ಕೆಲಗಳಲ್ಲಿ ತುಂಬಿ ಹರಿಯುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಇರುವಂತೆ ನಮ್ಮ ಜಿಲ್ಲೆಯಲ್ಲಿ ಪ್ರವಾಹ, ನೆರೆ ಹಾವಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ಕಂಡು ಬರುವುದಿಲ್ಲ. ಮಂಡ್ಯ, ಮದ್ದೂರು ಮತ್ತು ನಾಗಮಂಗಲ ತಾಲೂಕುಗಳಲ್ಲಿ ಪ್ರವಾಹ-ನೆರೆಹಾವಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಅವರು ವಿವರಿಸಿದರು.
ಮಳವಳ್ಳಿ ತಾಲೂಕಿನ 4 ಗ್ರಾಮ ಪಂಚಾಯತ್ಗಳಲ್ಲಿ ಮುತ್ತತ್ತಿ ಮತ್ತು ತಾಳವಾಡಿ ಸುತ್ತಮುತ್ತಲಿನ 9 ಗ್ರಾಮಗಳು, ಪಾಂಡವಪುರ ತಾಲೂಕಿನ 2 ಗ್ರಾ.ಪಂಗಳ ಎಣ್ಣೆಹೊಳೆ ಕೊಪ್ಪಲು ಮತ್ತು ಅದರ ಸುತ್ತಮುತ್ತಲಿನ 6 ಗ್ರಾಮಗಳು ಹಾಗೂ ಕೆ.ಆರ್.ಪೇಟೆ ತಾಲೂಕಿನ 2 ಗ್ರಾಮಗಳು, ಶ್ರೀರಂಗಪಟ್ಟಣ ತಾಲೂಕಿನ 7 ಗ್ರಾ.ಪಂ.ಗಳ 19 ಗ್ರಾಮಗಳು, ಜಿಲ್ಲೆಯಲ್ಲಿ ಒಟ್ಟು 14 ಗ್ರಾ.ಪಂಗಳ 36 ಗ್ರಾಮಗಳು ಪ್ರವಾಹ, ನೆರೆ ಹಾವಳಿ ಮತ್ತು ಪ್ರಕೃತಿ ವಿಕೋಪಗಳಿಗೆ ಒಳಗಾಗುವ ಸಂಭವವಿದೆ. ಹಾಗಾಗಿ ಆಯಾ ತಾಲೂಕುಗಳ ತಹಶೀಲ್ದಾರರು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕಾವೇರಿ ನದಿ ಹೆಚ್ಚು ಉಕ್ಕಿ ಹರಿಯುವುದರಿಂದ ನದಿ ಪ್ರದೇಶದ ಸುತ್ತಮುತ್ತಲಿನ ಜನರಲ್ಲಿ ಅರಿವು ಮೂಡಿಸಿ ಅವರನ್ನು ಸ್ಥಳಾಂತರಿಸುವ ಕಾರ್ಯವಾಗಬೇಕು. ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಕೆರೆಗಳ ಹಾನಿಯಿಂದ ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳು ಉಂಟಾಗಿದ್ದವು. ಆ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ರಕ್ಷಣಾ ಉಪಕರಣಗಳ ವಿವರ ಸಲ್ಲಿಸಿ:
ಪ್ರವಾಹ, ನೆರೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಲಭ್ಯವಿರುವ ರಕ್ಷಣಾ ಉಪಕರಣಗಳ ವಿವರವನ್ನು ಶೀಘ್ರವಾಗಿ ಸಲ್ಲಿಸಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಸಲಹಾ ಸಮಿತಿ ರಚಿಸಿ ಶೀಘ್ರವೇ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಆತಂಕಪಡಬೇಕಿಲ್ಲ. ಪ್ರವಾಹಕ್ಕೆ ಒಳಗಾದ ಸ್ಥಳಗಳ ಬಗ್ಗೆ ಮಾಹಿತಿ ಹಾಗೂ ಅಲ್ಲಿನ ರಕ್ಷಣಾ ಕಾರ್ಯಕ್ರಮಗಳ ಬಗ್ಗೆ 24 ಗಂಟೆಯೊಳಗೆ ವರದಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.