ಮಂಡ್ಯ: ತಾಕತ್ ಇದ್ರೆ ಪುಟ್ಟರಾಜು ಅವರು ನುಡಿದಂತೆ ನಡೆಯಲಿ ನನ್ನ ಹೆಸರು ಬಳಸಿಕೊಂಡು ಪುಟ್ಟರಾಜು ಮೈಲೇಜ್ ತಗೊಳ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಶಾಸಕ ಪುಟ್ಟರಾಜು ವಿರುದ್ಧ ಕಿಡಿಕಾರಿದ್ದಾರೆ. ಧಮ್, ತಾಕತ್ ಇದ್ರೆ ರಾಜಧನ ಯಾರು ವಂಚಿಸಿದ್ದಾರೆ ಎಂದು ಸಂಸದೆ ಸುಮಲತಾ ಹೇಳಲಿ ಎಂಬ ಶಾಸಕ ಪುಟ್ಟರಾಜು ಹೇಳಿಕೆ ವಿಚಾರವಾಗಿ ಮದ್ದೂರಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಅವರು, ತಾಕತ್ತು ಬಗ್ಗೆ ಮಾತನಾಡೋಕೆ ಹೋದರೆ ಹಳೆಯ ಮಾತನ್ನ ನೆನೆಪು ಮಾಡಿಕೊಳ್ಳಬೇಕಾಗುತ್ತೆ. ಚುನಾವಣೆ ಸಮಯದಲ್ಲಿ ನಮ್ಮ ಅಭ್ಯರ್ಥಿ ಎರಡೂವರೆ ಲಕ್ಷ ಲೀಡ್ ನಲ್ಲಿ ಗೆಲ್ಲದೇ ಇದ್ದಲ್ಲಿ ರಾಜಕಾರಣದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪುಟ್ಟರಾಜು ಹೇಳಿದ್ದರು. ತಾಕತ್ ಇದ್ದರೆ ಮೊದಲು ನುಡಿದಂತೆ ಮಾಡಲಿ ಅಮೇಲೆ ನಮ್ಮ ಬಗ್ಗೆ ಮಾತನಾಡಲು ಬರಲಿ ಎಂದು ಚಾಟಿ ಬೀಸಿದರು.
ಚುನಾವಣೆಗೆ ಶಾಸಕ ಪುಟ್ಟರಾಜು ಅವರಿಗೆ ಪಬ್ಲಿಸಿಟಿ ಬೇಕು - ಸುಮಲತಾ: ಚುನಾವಣೆ ಹತ್ತಿರ ಬರ್ತಿದೆ ಪುಟ್ಟರಾಜು ಅವರಿಗೆ ಪಬ್ಲಿಸಿಟಿ ಬೇಕು. ನನ್ನ ಹೆಸರು ಬಳಸಿಕೊಂಡು ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ನಾನು ಗಣಿಗಾರಿಕೆಯಿಂದ ಬರುತ್ತಿದ್ದ ರಾಜಧನವನ್ನ ವಂಚಿಸಿದವರು ಅಂತ ಹೇಳಿದ್ದೇ ಹೊರತು ಅವರ ಹೆಸರು ಪ್ರಸ್ತಾಪಿಸಿದ್ದನಾ? ಅದ್ಯಾಕೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿನೊಡ್ಕೊಳೋದು ಏಕೆ ಎಂದು ಪ್ರಶ್ನಿಸಿದರು. ರಾಜಧನ ವಂಚಿಸುತ್ತಿರುವವರು ಹಲವರು ಇದ್ದಾರೆ. ಈ ಬಗ್ಗೆ ಅವರಿಗೆ ನಾನು ಏಕೆ ಪ್ರೂಫ್ ಕೊಡಬೇಕು? ಗಣಿ ಇಲಾಖೆಯಿಂದ ಮಾಹಿತಿ ತೆಗೆದುಕೊಳ್ಳಲಿ, ಹೇಗಿದ್ದರು ಅವರು ಶಾಸಕರು ತಾನೇ ಎಂದು ಸುಮಲತಾ ಪ್ರಶ್ನಿಸಿದರು.
ಇಷ್ಟು ವರ್ಷ ಯಾಕೆ ಅವರು ಮಾಹಿತಿ ತೆಗೆದುಕೊಳ್ಳುವ ಕೆಲಸ ಮಾಡಿಲ್ಲ? ನೂರಾರು ಕೋಟಿ ರಾಯಲ್ಟಿ ಪೆಂಡಿಗ್ ಇದೆ. ದಿಶಾ ಸಭೆಯಲ್ಲಿ ಪ್ರಸ್ತಾಪ ಮಾಡಿ ಒಂದಷ್ಟು ಪೆಂಡಿಂಗ್ ಹಣ ಕಟ್ಟಿಸಿದ್ದೇವೆ. ರಾಯಲ್ಟಿ ಪೆಂಡಿಂಗ್ ಹಣ ಕಟ್ಟಿಸುವ ಕೆಲಸವನ್ನ ಅವರೇ ಮಾಡಿಸ ಬಹುದಿತ್ತು ಯಾಕೆ ಮಾಡಿಲ್ಲ? ಅದನ್ನ ಬಿಟ್ಟು ರಾಯಲ್ಟಿ ಕಟ್ಟದವರ ಪರ ಸಮರ್ಥನೆ ಮಾಡುತ್ತಿದ್ದಾರೆ. ಇದರಿಂದ ಕುಂಬಳಕಾಯಿ ಕಳ್ಳ ನೀವೇ ಅಂತ ತಾನೇ ಅರ್ಥ. ನನ್ನ ಹೆಸರು ತೆಗೆದುಕೊಂಡರೆ ಮಾಧ್ಯಮದಲ್ಲಿ ಅವರಿಗೆ ಪಬ್ಲಿಸಿಟಿ ಸಿಗುತ್ತೆ ಅಷ್ಟೆ ಎಂದು ಪುಟ್ಟರಾಜು ವಿರುದ್ದ ಸಂಸದೆ ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ಶಾಸಕ ಡಿಸಿ ತಮ್ಮಣ್ಣಗೆ ಸುಮಲತಾ ಟಕ್ಕರ್: ಇನ್ನು ಅಭಿವೃದ್ದಿಗಾಗಿ ವಿಶೇಷ ಅನುದಾನ ತಂದು ಮದ್ದೂರು ಶಾಸಕ ಡಿಸಿ ತಮ್ಮಣ್ಣಗೆ ಸಂಸದೆ ಸುಮಲತಾ ಅಂಬರೀಶ್ ಟಕ್ಕರ್ ಕೊಟ್ಟಿದ್ದಾರೆ. ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ಚಾಲನೆ ಕೊಟ್ಟು ಶಾಸಕ ಡಿಸಿ ತಮ್ಮಣ್ಣಗೆ ಸೆಡ್ಡು ಹೊಡೆದಿದ್ದಾರೆ. ಸಂಸದರ ವಿಶೇಷ ಕೋರಿಕೆಯ ಮೆರೆಗೆ ಮಂಜೂರಾದ ಅನುದಾನದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಟ್ಟೇಗೌಡನದೊಡ್ಡಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸುಮಲತಾ ಅಂಬರೀಶ್ ಚಾಲನೆ ನೀಡಿದರು.
ಇದನ್ನೂ ಓದಿ: ಧಮ್, ತಾಕತ್ತು ಇದ್ರೆ ಯಾರು ರಾಜಧನ ವಂಚಿಸಿದ್ದಾರೆ ಅನ್ನೋದನ್ನು ಹೇಳಬೇಕು: ಶಾಸಕ ಪುಟ್ಟರಾಜು