ಮಂಡ್ಯ : ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಆರಂಭಿಸುವಂತೆ ಒತ್ತಾಯಿಸಿ ಕಬ್ಬು ಬೆಳೆಗಾರರ ಒಕ್ಕೂಟದ ಸದಸ್ಯರು ಮಂಡ್ಯದಲ್ಲಿ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ನಿನ್ನೆ ಮೈಸೂರಿನಲ್ಲಿನ ನಡೆದ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಹೋರಾಟಗಾರರು ಭೇಟಿ ಮಾಡಿದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾರ್ಖಾನೆಗೆ ಹಣ ನೀಡಿದ್ದರು. ಆದರೆ, ಇಲ್ಲಿಯ ಆಡಳಿತ ಮಂಡಳಿಯವರು ಸರಿಯಾಗಿ ಹಣ ಬಳಸದೆ ಚೆನ್ನಾಗಿದ್ದ ಯಂತ್ರವನ್ನೇ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿದರು.
ಸಿಐಜಿ ವರದಿಯಲ್ಲಿ 350 ಕೋಟಿ ರೂ. ಬಗ್ಗೆ ಮಾಹಿತಿ ಇಲ್ಲ. ಇವರು ಕಾರ್ಖಾನೆಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿ ಆಧುನಿಕವಾಗಿ ಮಾಡಲು ಹೋಗಿ ಹಣ ಗುಳುಂ ಮಾಡಿದ್ದಾರೆ. ಕಾರ್ಖಾನೆ ಶುರು ಮಾಡಲು ಕೇವಲ 20 ಕೋಟಿ ಹಣ ಸಾಕು. ಪಾಂಡವಪುರ ಕಾರ್ಖಾನೆ ರೀತಿ ಮೈಶುಗರ್ ಕಾರ್ಖಾನೆ ಮಾಡಬೇಡಿ ಎಂದು ಮನವಿ ಮಾಡಿದರು.
ಇದಕ್ಕೆ ಗೃಹ ಸಚಿವರು ಪ್ರತಿಕ್ರಿಯಿಸಿ, ಇದರ ಬಗ್ಗೆ ವಿವಿರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಳಿ ಮಾತನಾಡಿ ಸರಿ ಪಡಿಸುವ ಕೆಲಸ ಮಾಡುವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ವೇಣುಗೋಪಾಲ್ ಹಾಗೂ ತಂಡದ ಸದಸ್ಯರು ಹಾಜರಿದ್ದರು.