ಮಂಡ್ಯ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಎಂಆರ್‌ಎನ್ ಕೇನ್ ಪವರ್ ಆ್ಯಂಡ್ ಬಯೋ ರಿಫೈನರಿಸ್ಸ್ ಸಂಸ್ಥೆ ಗುತ್ತಿಗೆ ಒಪ್ಪಂದದಂತೆ ನೋಂದಣಿ ಮಾಡಿಕೊಳ್ಳಲು 26 ಕೋಟಿ ರೂ. ಮುಂಗಡ ಶುಲ್ಕವನ್ನು ಪಾವತಿಸಬೇಕಾಗಿದ್ದು, ಸರ್ಕಾರದ ಹಂತದಲ್ಲಿದೆ ಎಂದು ಕಾರ್ಖಾನೆ ಎಂಡಿ ವಿಕ್ರಮರಾಜ್ ಅರಸ್ ದೂರವಾಣಿ ಮೂಲಕ ತಿಳಿಸಿದ್ದಾರೆ.
ಪಿಎಸ್‌ಎಸ್‌ಕೆ ಈ ಹಿಂದೆ ಪಡೆದಿದ್ದ ಸಾಲ ಪಾವತಿಸುವಂತೆ ಎನ್‌ಸಿಡಿಸಿ, ಎಂಡಿಸಿಸಿ ಬ್ಯಾಂಕ್ ಹಾಗೂ ಸುಮ್ಯಾಕ್ ಇಂಟರ್ ನ್ಯಾಷನಲ್ ಲಿ. ಕಂಪನಿಗಳು ನ್ಯಾಯಾಲಯದಲ್ಲಿ ಕೇಸ್ ಹಾಕಿರುವ ಕಾರಣ, ಕಾರ್ಖಾನೆಯನ್ನು ಹರಾಜು ಮಾಡುವ ಹಂತ ತಲುಪಿದೆ. ಈ ಎಲ್ಲಾ ವಿಚಾರಗಳು ಸರ್ಕಾರದ ಗಮನದಲ್ಲಿದ್ದು, ಸರ್ಕಾರದ ಸಾಲ ತೀರುವಳಿ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರಿರುವ ಕಂಪನಿ ಮುಖ್ಯಸ್ಥರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ.
ಈ ಸಮಸ್ಯೆ ಇತ್ಯರ್ಥವಾದ ಕೂಡಲೇ ಎಂಆರ್‌ಎನ್ ಕಾರ್ಖಾನೆಗೆ ಪ್ರಸಕ್ತ ಸಾಲಿನಲ್ಲಿ ನೀಡಬೇಕಾದ ಅಫ್ರಂಟ್ ಮೊತ್ತ 20 ಕೋಟಿ ಹಾಗೂ 2021-22 ನೇ ಸಾಲಿನ 1 ಕೋಟಿ ಸೇರಿ 21 ಕೋಟಿ ನೀಡಿ ಗುತ್ತಿಗೆ ಮಾಡಿಕೊಳ್ಳಲು ಸಿದ್ಧರಿರುವುದಾಗಿ ಹೇಳಿದರು.
ಕಾರ್ಮಿಕರ ಮರು ನೇಮಕ: ಈ ತಿಂಗಳ ಅಂತ್ಯದಲ್ಲಿ ಕಬ್ಬು ಅರೆಯುವಿಕೆ ಪ್ರಾರಂಭಿಸಲಿದ್ದು, ಕಾರ್ಖಾನೆಯ ವ್ಯಾಪ್ತಿಯ ಕಬ್ಬು ಬೆಳೆಗಾರರು ಇದಕ್ಕೆ ಸಹಕರಿಸಬೇಕು. ಜತೆಗೆ ಕಾರ್ಖಾನೆಯಿಂದ ಬಿಡುಗಡೆಗೊಂಡಿರುವ 21 ಮಂದಿ ನೌಕರರನ್ನು ಎಂಆರ್‌ಎನ್ ಸಂಸ್ಥೆಯ ನಿಯಮಾವಳಿಯಂತೆ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಗುತ್ತಿಗೆ ಸಂಸ್ಥೆ ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದರು.