ಮಂಡ್ಯ: ಇಂದು ಆಷಾಢ ಮಾಸದ ಕೊನೆ ಶುಕ್ರವಾರ. ಶಕ್ತಿ ದೇವತೆಗಳ ಆರಾಧನೆಗೆ ಪ್ರಶಸ್ತ ಕಾಲವೂ ಹೌದು. ಆದ್ರೆ ಈ ವೇಳೆ, ಕೊರೊನಾದಿಂದಾಗಿ ಭಕ್ತರು ಭಯದಲ್ಲೇ ಚಾಮುಂಡೇಶ್ವರಿಯನ್ನು ಸ್ಮರಿಸಿದ್ದಾರೆ. ಅಲ್ಲದೆ ಅಧಿದೇವತೆಯ ಆರಾಧಕರು ಕೊರೊನಾ ನಿಯಂತ್ರಣಕ್ಕೆ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದ್ದಾರೆ. ಅದರಲ್ಲೂ ರೈತರ ಬವಣೆ ನಿವಾರಣೆ ಮಾಡುವಂತೆ ಬೇಡಿಕೊಂಡು ತರಕಾರಿಗಳ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀರಂಗಪಟ್ಟಣದ ಪುರೋಹಿತರಾದ ಲಕ್ಷ್ಮೀಶ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ ನೆರವೇರಿತು. ಚಾಮುಂಡೇಶ್ವರಿ ದೇವಾಲಯದಲ್ಲಿ ಹೂಕೋಸಿನ ಅಲಂಕಾರ ಮಾಡುವ ಮೂಲಕ ರೈತರ ಬೆಳೆ ರಕ್ಷಣೆ ಹಾಗೂ ಆರ್ಥಿಕ ಸಮಸ್ಯೆ ಪರಿಹಾರಕ್ಕೆ ದೇವಿಯ ಮೊರೆ ಹೋಗಲಾಯಿತು.
ಆಷಾಢ ಮಾಸದ 4 ವಾರವೂ ವಿವಿಧ ಬಗೆಯ ತರಕಾರಿಗಳಿಂದ ದೇವಿಯನ್ನು ಶೃಂಗರಿಸಲಾಗಿದೆ. ಮೊದಲ ವಾರ ಸೌತೆಕಾಯಿ, ಎರಡನೇ ವಾರ ಅನಾನಸ್, ಮೂರನೇ ವಾರ ಬಾಳೆಹಣ್ಣು ಹಾಗೂ ಕೊನೆಯ ವಾರವಾದ ಇಂದು ಹೂಕೋಸಿನಲ್ಲಿ ದೇವಿ ಕಂಗೊಳಿಸಿದಳು.
ಬೆಳಗ್ಗೆಯಿಂದಲೂ ಪೂಜೆ, ಪುನಸ್ಕಾರಗಳು ದೇವಾಲಯದ ಆವರಣದಲ್ಲಿ ನಡೆದವು. ಚಂಡಿಕಾ ಯಾಗ, ಗಣಪತಿ ಹೋಮ ಸೇರಿದಂತೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ ಮೂಲಕ ದೇವಿಯ ಪೂಜೆ ನಡೆಯಿತು.