ಮಂಡ್ಯ: ಡೆತ್ನೋಟ್ನಲ್ಲಿ ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರು ನನ್ನ ಅಂತ್ಯಕ್ರಿಯೆಗೆ ಬರಬೇಕೆಂದು ಬರೆದಿದ್ದರಂತೆ. ಹೀಗಾಗಿ ನನಗೆ ಈ ವಿಷಯ ತಿಳಿದ ಮೇಲೆ ಅಂತ್ಯಕ್ರಿಯೆಗೆ ಆಗಮಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಾಲೂಕಿನ ಕೋಡಿದೊಡ್ಡಿ ಗ್ರಾಮದಲ್ಲಿ ಮೃತ ಅಭಿಮಾನಿಯ ಅಂತಿಮ ದರ್ಶನ ಪಡೆದರು. ಬಳಿಕ ಪ್ರತಿಕ್ರಿಯಿಸಿ, ನನಗೆ ಆತ ಅಂತಹ ಪರಿಚಯ ಇಲ್ಲ. ಪಾಪ ಆತ ನನಗೆ ಗೊತ್ತಿಲ್ಲದೆ ದೊಡ್ಡ ಅಭಿಮಾನಿಯಾಗಿದ್ದ. ಅಭಿಮಾನಿಯಾಗಲಿ, ಆಗದೇ ಇರಲಿ. ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದುಕೊಂಡಿದ್ದರಿಂದ, ನಾನು ಬರಲೇಬೇಕು. ಹಾಗಾಗಿ ಆಗಮಿಸಿದ್ದೇನೆ ಎಂದರು.
ಸಾಮಾನ್ಯ ಕುಟುಂಬದಿಂದ ಬಂದಿದ್ದ ವ್ಯಕ್ತಿ ಆತ. ಅವನು ಮನೆ ಜವಾಬ್ದಾರಿ ಹೊತ್ತಿದ್ದ. ಈತನ ಸಾವಿನಿಂದ ಮನೆಯವರಿಗೆ ನಷ್ಟ ಆಗಿದೆ. ಆತನ ತಾಯಿ ಅಣ್ಣನನ್ನು ನಾನು ಮಾತನಾಡಿಸಿದೆ. ಇನ್ನೂ ಚಿಕ್ಕ ವಯಸ್ಸು, ಮದುವೆಯಾಗಿಲ್ಲ. ಚಿಕ್ಕ ವಯಸ್ಸಿಗೆ ಪ್ರಾಣ ಕಳೆದುಕೊಂಡಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಮಾತ್ರ ಅಲ್ಲ ಸಮಾಜಕ್ಕೂ ನಷ್ಟವಾಗಿದೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಅವರು, ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ. ಆತ್ಮಹತ್ಯೆಗೆ ಮುಂದಾಗುವುದು ಸರಿಯಾದ ನಿರ್ಧಾರ ಅಲ್ಲ. ಯಾವುದೇ ತೊಂದರೆ ಇರಲಿ, ಸಮಸ್ಯೆ ಇರಲಿ. ಮನೆಯವರ ಜೊತೆ, ಸ್ನೇಹಿತರ ಜೊತೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ: ಅಂತ್ಯಕ್ರಿಯೆಗೆ ಯಶ್, ಮಾಜಿ ಸಿಎಂ ಸಿದ್ದರಾಮಯ್ಯ ಬರುವಂತೆ ಮನವಿ