ಮಂಡ್ಯ : ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ 15 ವರ್ಷಗಳಿಂದ ಹಾಲಿಗೆ ನೀರನ್ನು ಸೇರಿಸಲಾಗುತ್ತಿದೆ. 10 ಸಾವಿರ ಕೋಟಿ ರೂ.ಗೂ ಹೆಚ್ಚು ಹಗರಣ ನಡೆದಿದೆ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಗಂಭೀರವಾಗಿ ಆರೋಪಿಸಿದರು. ನಗರದಲ್ಲಿ ಮಾತನಾಡಿದ ಅವರು, ಹಾಲಿಗೆ ನೀರು ಸೇರುತ್ತಿರುವ ಪರಿಣಾಮ ನಿತ್ಯ ಒಕ್ಕೂಟಕ್ಕೆ 15 ಲಕ್ಷ ರೂ. ನಷ್ಟ ಸಂಭವಿಸುತ್ತಿದೆ ಎಂದು ಮನ್‌ಮುಲ್‌ನ ಹಿರಿಯ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹೆಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ತನಿಖೆಯಾಗಬಾರದು ಅಂತ ಎಲ್ಲಿ ಹೇಳಿದ್ದಾರೆ? ಅವರೂ ಸಹ ಸಮಗ್ರ ತನಿಖೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಈಗ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲ. ಬಿಜೆಪಿಯವರು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಸವಾಲು ಹಾಕಿದರು.
ಮಾಜಿ ಸಚಿವ ಚೆಲುವರಾಯಸ್ವಾಮಿ ಅವರು ನಮ್ಮ ಪಕ್ಷ ನಮ್ಮ ನಾಯಕರ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ಸಾಧ್ಯವೇ?. ರಾಜಕೀಯ ಲಾಭಕ್ಕಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಹೆಸರನ್ನು ಬಳಕೆ ಮಾಡಿಕೊಂಡಿದ್ದಾರೆ. ಅವರಿಗೆ ಜಿಲ್ಲೆಯೊಳಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅವರು ಆಡಿಯೋ ಅಸ್ತ್ರವನ್ನು ಪ್ರಯೋಗ ಮಾಡಿದ್ದಾರೆ. ಅವರು ರಾಜಕೀಯವಾಗಿ ಬೆಳೆದು ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಲಿ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ನನ್ನ ಬಡ್ಡಿಮಗ ಎಂತಾನಲ್ಲ, ಆತ ನಮ್ಗೆ ಬಡ್ಡಿ ಕೊಡುವುದಿರಲಿ, ನಾ ಕೊಟ್ಟ ಅಸಲೇ ವಾಪಸ್ ಕೊಟ್ಟಿಲ್ಲ.. ಹೆಚ್‌ಡಿಕೆ
ಕೆಎಂಎಫ್ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಕಾಣುವುದಕ್ಕೆ ಹೆಚ್ ಡಿ ರೇವಣ್ಣ ಮೂಲ ಕಾರಣಕರ್ತರು. ಅದರ ಬಗ್ಗೆ ಯಾರೂ ಮಾತನಾಡುವುದೇ ಇಲ್ಲ. ಹಾಸನದಲ್ಲೂ ಹಾಲಿಗೆ ನೀರು ಸೇರಿಸಲಾಗುತ್ತಿದೆ ಎನ್ನುವುದಾದರೆ ನಿಮ್ಮದೇ ಸರ್ಕಾರವಿದೆ. ಸಮಗ್ರ ತನಿಖೆ ನಡೆಸಲಿ ಎಂದು ಬಿಜೆಪಿ ಮುಖಂಡ ಎ.ಮಂಜು ಆರೋಪಕ್ಕೆ ತಿರುಗೇಟು ನೀಡಿದರು.
ಸೂಪರ್‌ಸೀಡ್ ಮಾಡಿ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಈಗಿರುವ ಆಡಳಿತ ಮಂಡಳಿ ಹಾಲಿಗೆ ನೀರು ಸೇರುತ್ತಿರುವುದನ್ನು ಪತ್ತೆ ಹಚ್ಚಿ ಹಗರಣವನ್ನು ಬಯಲಿಗೆಳೆದಿದೆ. ಅಕ್ರಮವನ್ನು ಹೊರಗೆಳೆದ ಆಡಳಿತ ಮಂಡಳಿಯನ್ನೇ ಸೂಪರ್‌ಸೀಡ್ ಮಾಡಿ ಎನ್ನುವುದರಲ್ಲಿ ಅರ್ಥವಿದೆಯಾ?. ಇದು ರಾಜಕೀಯ ಹುನ್ನಾರವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.