ಮಂಡ್ಯ: ಜಿಲ್ಲೆಯಲ್ಲಿ ರಾತ್ರೋರಾತ್ರಿ ದುರಂತವೊಂದು ತಪ್ಪಿದೆ. ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಅಪಾಯದಲ್ಲಿದ್ದ ಕಟ್ಟಡ ಒಡೆಯಲು ನಿರಾಸಕ್ತಿ ತಾಳಿದ್ದರಿಂದ ಮಕ್ಕಳು ಅಪಾಯಕ್ಕೆ ಸಿಲುಕಿಕೊಳ್ಳುವ ಸಂದರ್ಭ ಉಂಟಾಗಿತ್ತು. ಆದರೆ ಮಕ್ಕಳು ಅದೃಷ್ಟತ್ ಅಪಾಯದಿಂದ ಪಾರಾಗಿದ್ದಾರೆ.
ಮಂಡ್ಯ ತಾಲೂಕಿನ ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇರುವ ಕೊಠಡಿಗಳಲ್ಲಿ ಎರಡು ಕೊಠಡಿಗಳು ಶಿಥಿಲಗೊಂಡಿದ್ದವು. 2012ರಲ್ಲೇ ಶಾಲಾ ಶಿಕ್ಷಕರು ಶಾಲಾ ಕೊಠಡಿಯ ಅಪಾಯದ ಬಗ್ಗೆ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಗಮನಕ್ಕೆ ತಂದು ನೆಲಸಮಕ್ಕೆ ಅನುಮತಿ ಕೇಳಿದ್ದರು. ಆದರೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಶಿಥಿಲಗೊಂಡ ಕೊಠಡಿಯಲ್ಲೇ ಪಾಠ ಮಾಡಲಾಗುತ್ತಿತ್ತು.
ಕಳೆದ ರಾತ್ರಿ ಶಿಥಿಲಗೊಂಡಿದ್ದ ಎರಡು ಕೊಠಡಿಗಳಲ್ಲಿ ಒಂದು ನೆಲಕ್ಕೆ ಉರುಳಿದೆ. ಈ ಕೊಠಡಿಯಲ್ಲಿ ಶನಿವಾರದವರೆಗೂ ತರಗತಿಗಳನ್ನು ನಡೆಸಲಾಗಿದೆ. ಮತ್ತೊಂದು ಕೊಠಡಿಯಲ್ಲಿ ಮಕ್ಕಳ ಊಟದ ತಟ್ಟೆ ಹಾಗೂ ಲೋಟಗಳನ್ನು ಇರಿಸಿದ್ದು, ಮಕ್ಕಳು ಈ ಕೊಠಡಿಯನ್ನೂ ಉಪಯೋಗಿಸುತ್ತಿದ್ದರು. ಕೊಠಡಿ ಸಮೀಪವೇ ಮಕ್ಕಳು ಆಟವಾಡುವುದು ಸೇರಿದಂತೆ ಇನ್ನಿತರೆ ಚಟುವಟಿಕೆ ಮಾಡುತ್ತಿದ್ದರು. ಒಂದೊಮ್ಮೆ ಮಕ್ಕಳು ಇದ್ದಾಗ ಕೊಠಡಿ ಕುಸಿದಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಆದರೆ ಮಕ್ಕಳ ಅದೃಷ್ಟಕ್ಕೆ ಕೊಠಡಿ ಭಾನುವಾರ ರಾತ್ರಿ ಉರುಳಿದೆ.
ಕೊಠಡಿ ನೆಲಸಮಕ್ಕೆ ಅನುಮತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು 2012ರಲ್ಲೇ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ನಡೆಸಿದ್ದಾರೆ. ಆದರೆ ಇದುವರೆಗೂ ಅಧಿಕಾರಿಗಳು ಅನುಮತಿ ನೀಡಿಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಜಿಲ್ಲಾ ಪಂಚಾಯತ್ ವಿರುದ್ಧ ಸ್ಥಳೀಯರು ಹಾಗೂ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯಲ್ಲಿ ಇಂತಹ ಕೊಠಡಿಗಳು ಬಹಳಷ್ಟು ಇದ್ದು, ಇನ್ನಾದರೂ ಎಚ್ಚೆತ್ತುಕೊಂಡು ಕೊಠಡಿಗಳ ತೆರವು ಮಾಡಿ, ಅಪಾಯ ತಪ್ಪಿಸಿ ಎಂದು ಮನವಿ ಮಾಡುತ್ತಿದ್ದಾರೆ.