ಮಂಡ್ಯ: ಕೊರೊನಾ ಹೋರಾಟದಲ್ಲಿ ಮಂಚೂಣಿ ಯೋಧರಾಗಿ ಕೆಲಸ ಮಾಡ್ತಿರೋ ಪೌರ ಕಾರ್ಮಿಕರು ಮತ್ತು ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡ್ತಿರೋ ಕಾರ್ಯಕರ್ತರಿಗೆ ಸ್ವಾಮೀಜಿಯೊಬ್ಬರು ಪಾದಪೂಜೆ ಮಾಡಿ ಸನ್ಮಾನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೇಡದಹಳ್ಳಿಯ ಶ್ರೀ ಪಂಚಭೂತೇಶ್ವರ ಮಠದ ಪೀಠಾಧಿಪತಿ ರುದ್ರಮುನಿ ಸ್ವಾಮೀಜಿ, ತಮ್ಮ ಮಠದ ಹಿರಿಯ ಲಿಂಗೈಕ್ಯ ಶ್ರೀ ಹರಿಹರ ಅಪ್ಪಾಜಿ ಸ್ವಾಮೀಜಿಯ 11ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೊರೊನಾ ವಾರಿಯರ್ಸ್ಗೆ ಪಾದಪೂಜೆ ಮಾಡಿದರು.
ಕೆ.ಆರ್. ಪೇಟೆ ತಾಲೂಕಿನ 30ಕ್ಕೂ ಹೆಚ್ಚು ಪೌರಕಾರ್ಮಿಕರು ಹಾಗೂ ಯಾವುದೇ ಫಲಾಪೇಕ್ಷೆ ಇಲ್ಲದೆ ಕೊರೊನಾ ಮೃತರ ಅಂತ್ಯಸಂಸ್ಕಾರ ಮಾಡ್ತಿರೋ RSS & PFI ಸಂಘಟನೆಯ ಕೆಲ ಸದಸ್ಯರನ್ನು ಬೇಡದ ಹಳ್ಳಿ ಶ್ರೀಮಠಕ್ಕೆ ಕರೆಸಿ ಪಾದಪೂಜೆ ಮಾಡಿದರು. ಬಳಿಕ ಪುಷ್ಪಾರ್ಚನೆಗೈದು ಸನ್ಮಾನಿಸಿ ವಿಶೇಷವಾಗಿ ತಮ್ಮ ಹಿರಿಯ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಕೂಡ ಭಾಗವಹಿಸಿ, ಸ್ವಾಮೀಜಿಗಳ ಜೊತೆ ಸನ್ಮಾನಿತರಿಗೆ ಪುಷ್ಪಾರ್ಚನೆಗೈದು ಸ್ವಾಮೀಜಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.