ಮಂಡ್ಯ : ಜಿಲ್ಲೆಯ ಗಡಿ ಭಾಗ ಮದ್ದೂರು ತಾಲ್ಲೂಕಿನ ನಿಡಘಟ್ಟ ಚೆಕ್ ಪೋಸ್ಟ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು, ಚುನಾವಣಾ ಸಿಬ್ಬಂದಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಇಬ್ಬರು ಕಾರು ಚಾಲಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ನಿಡಘಟ್ಟ ಗಡಿ ಭಾಗದಲ್ಲಿ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಜಿಲ್ಲಾಡಳಿತ ಚೆಕ್ ಪೋಸ್ಟ್ ನಿರ್ಮಾಣ ಮಾಡಿದೆ. ಎಂದಿನಂತೆ ಇಂದು ಚೆಕ್ ಪೋಸ್ಟ್ ಮುಖ್ಯಸ್ಥ ಪ್ರದೀಪ್, ಸಹಾಯಕ ಸಂತೋಷ್ ಹಾಗೂ ಕಾನ್ಸ್ಟೇಬಲ್ ವಿಷಕಂಠಯ್ಯ ಅವರು ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ರಸ್ತೆ ವಿಭಜಕದ ಮೇಲೆ ಹೋಗಿ ನಿಂತಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಚೆಕ್ ಪೋಸ್ಟ್ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಚುನಾವಣಾ ಸಿಬ್ಬಂದಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ಇನ್ನು ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಚೆಕ್ ಪೋಸ್ಟ್ ನಿರ್ಮಾಣದಿಂದ ಚುನಾವಣಾ ಸಿಬ್ಬಂದಿಗಳು ಭಯಭೀತರಾಗಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದೊಂದು ವಾರದೊಳಗೆ ಎರಡು ಮೂರು ಬಾರಿ ಇದೇ ರೀತಿಯ ಪ್ರಕರಣಗಳು ನಡೆದಿವೆಯಂತೆ.
ರಸ್ತೆಯಲ್ಲಿ ಅತೀ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಇಂತಹ ಘಟನೆಗಳು ಸಂಭವಿಸುತ್ತಿವೆ. ಹೀಗಾಗಿ ಚುನಾವಣೆ ಮುಗಿಯುವವರೆಗೂ ಹೆದ್ದಾರಿ ಪ್ರಾಧಿಕಾರ ರಸ್ತೆಗೆ ಹಂಪ್ಸ್ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಈ ಘಟನೆ ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾರದ ಹಿಂದೆ ಸಂಭವಿಸಿತ್ತು ಭೀಕರ ಅಪಘಾತ : ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಕಳೆದ ತಿಂಗಳು 26 ರಂದು ಬೈಕ್ ಸವಾರನ ನಿಂಯತ್ರಣ ತಪ್ಪಿ ಭೀಕರ ರಸ್ತೆ ಅಪಘಾತವೊಂದು ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಸಂಭಿಸಿತ್ತು. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರನ ಕುತ್ತಿಗೆ ಸೀಳಿ, ಎಡಗೈ ಕಟ್ ಆಗಿ ಸವಾರ ಸ್ಥಿತಿ ಚಿಂತಾಜನಕವಾಗಿತ್ತು. ತಮಿಳುನಾಡು ಮೂಲದ ಪ್ರಿಯಾಂಕ ರಾಜು(32) ಮೃತರಾಗಿದ್ದು, ಹಾಸನದ ದಾಸನಕೊಪ್ಪಲು ನಿವಾಸಿ ಲಕ್ಷ್ಮೀನಾರಾಯಣಗೌಡ ಕೋಮಾ ಸ್ಥಿತಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಗಾಯಾಳುವಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿತ್ತು.
ಇಬ್ಬರು ಬೆಂಗಳೂರಿನ ಖಾಸಗಿ ಕಂಪನಿಯ ಸಹೋದ್ಯೋಗಿಗಲಾಗಿದ್ದು, ಒಂದೇ ಬೈಕಿನಲ್ಲಿ ಮೈಸೂರಿನ ಪ್ರವಾಸಕ್ಕೆಂದು ಹೋಗಿದ್ದು, ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿತ್ತು. ಈ ಘಟನೆ ನಡೆಯುವ 2 ಎರಡು ದಿನಗಳ ಹಿಂದೆ ಕೂಡಾ ಕೊಡಗು ಮೂಲದ ತಾಯಿ ಮಗ ಇದೇ ರಸ್ತೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಮದ್ದೂರು ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಸ್ಟೇರಿಂಗ್ ಲಾಕ್ ಆಗಿ ಕಬ್ಬಿನ ಗದ್ದೆಗೆ ನುಗ್ಗಿದ KSRTC ಬಸ್: ತಪ್ಪಿದ ಭಾರಿ ಅನಾಹುತ