ಮಂಡ್ಯ: ರಾಜ್ಯದ ಮೈತ್ರಿ ಸರ್ಕಾರದಲ್ಲಿರುವ ಶಾಸಕರ ಅಸಮಾಧಾನಕ್ಕೆ ಅಲ್ಲಿರುವ ತಾರತಮ್ಯವೇ ಕಾರಣ ಎಂದು ಮಾಜಿ ಡಿಸಿಎಂ ಆರ್.ಆಶೋಕ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಮೈತ್ರಿ ಸರ್ಕಾರ ಪತನದತ್ತ ಸಾಗುತ್ತಿದೆ. ಸರ್ಕಾರದಲ್ಲಿ ಗುಂಪುಗಾರಿಕೆ ಹೆಚ್ಚಾಗಿದ್ದು, ಕುಮಾರಸ್ವಾಮಿ ಆಡಳಿತದ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಜೆಡಿಎಸ್ ಶಾಸಕರಿಗೊಂದು ನೀತಿ, ಕಾಂಗ್ರೆಸ್ ಶಾಸಕರಿಗೊಂದು ನೀತಿ ಎಂಬಂತಾಗಿದೆ. ಹಾಗಾಗಿ ಅಲ್ಲಿರುವ ತಾರತಮ್ಯವೇ ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
ಆನಂದ್ ಸಿಂಗ್ ರಾಜೀನಾಮೆಯಿಂದ ಸರ್ಕಾರದ ಪತನ ಆರಂಭವಾಗಿದೆ. ಆನಂದ್ ಸಿಂಗ್ ಜೊತೆಗೆ ಹಲವು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಆದರೆ ನಾವು ಆಪರೇಷನ್ ಕಮಲ ಮಾಡಲ್ಲ. ಸರ್ಕಾರ ತಾನಾಗೇ ಬೀಳಲಿದೆ. ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು. ಆದ್ರೆ ಅವರು ಕುರ್ಚಿಗೆ ಅಂಟಿ ಕುಳಿತಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ಈ ಸರ್ಕಾರ ಬಿದ್ದೋಗಲಿ ಎಂದು ಬಯಸುತ್ತಿದ್ದಾರೆ ಎಂದರು.
ನಾವು ಸರ್ಕಾರ ಮಾಡ್ತೀವಿ. ಆದರೆ ಮಧ್ಯಂತರ ಚುನಾವಣೆಗೆ ಹೋಗಲ್ಲ. ಮಧ್ಯಂತರ ಚುನಾವಣೆಯ ಅವಶ್ಯಕತೆಯೂ ಇಲ್ಲ. ಏಕೆಂದರೆ ನಾವು 105 ಜನ ಇದ್ದೀವಿ. ನಮಗೆ ಸರ್ಕಾರ ರಚಿಸುವ ನೈತಿಕತೆ ಇದೆ ಎಂದು ಹೇಳಿದರು. ಸರ್ಕಾರದ ಸುಳ್ಳು ಭರವಸೆಗಳಿಂದ ಕರ್ನಾಟಕದ ಜನ ಬೇಸತ್ತಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ರಾಜೀನಾಮೆ ಪರ್ವ ಶುರುವಾಗಲಿದೆ. ಎಣಿಕೆ ಮಾಡದಷ್ಟು ಆಶ್ಚರ್ಯಕರವಾಗಿ ಒಂದಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ ಎಂದರು.
ಇನ್ನು ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿಗೆ ಟಾಂಗ್ ನೀಡಿ ಮಾತನಾಡಿದ ಅವರು, ಅಣ್ಣನನ್ನೇ ಅವರ ಕೈಯಲ್ಲಿ ಹಿಡಿದುಕೊಳ್ಳಲು ಆಗದಿದ್ದ ಮೇಲೆ ರಿವರ್ಸ್ ಆಪರೇಷನ್ ಹೇಗೆ ಮಾಡ್ತಾರೆ ಎಂದು ಪ್ರಶ್ನೆ ಮಾಡಿದರು.