ಮಂಡ್ಯ: ಯುಗಾದಿ ಹಬ್ಬ ಸಂಭ್ರಮದಿಂದ ಮುಗಿದಿದೆ. ಇದೀಗ ವರ್ಷತೊಡಕು ಆಚರಣೆಗೆ ಕೆಲವು ತೊಡಕುಗಳು ಎದುರಾಗಿವೆ. ಇದಕ್ಕೆ ಕಾರಣ, ಕೆಲ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಲಾಲ್ ಮಾಂಸ ವಿರೋಧಿ ಅಭಿಯಾನ.
ಮಂಡ್ಯ ನಗರದ ವಿವಿಧೆಡೆ ಕರ ಪತ್ರಗಳನ್ನು ಹಂಚಿಕೆ ಮಾಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ಯುಗಾದಿ ವರ್ಷತೊಡಕು ಆಚರಣೆ ಮಾಡುವವರು ಹಲಾಲ್ ಮಾಂಸ ತ್ಯಜಿಸುವಂತೆ ಸೂಚಿಸಿದ್ದಾರೆ. ಹಿಂದುಗಳು ಬಲಿ ನೀಡಿದ ಕುರಿ, ಕೋಳಿಯನ್ನು ಮುಸ್ಲಿಮರು ಖರೀದಿ ಮಾಡಲ್ಲ. ಹಾಗಾಗಿ, ಹಲಾಲ್ ಮಾಂಸಕ್ಕೆ ಬದಲಾಗಿ ಜಟ್ಕಾ ಮಾಂಸವನ್ನು ಅಥವಾ ಹಿಂದೂಗಳು ಮಾರಾಟ ಮಾಡುವ ಅಂಗಡಿಗಳಲ್ಲೇ ಮಾಂಸ ಖರೀದಿಸುವಂತೆ ಮನವಿ ಮಾಡಿದ್ದಾರೆ.
ಹಲಾಲ್ ವಿರೋಧಿ ಅಭಿಯಾನಕ್ಕೆ ಮಂಡ್ಯದಲ್ಲಿ ವಿರೋಧವೂ ಕೇಳಿ ಬಂದಿದೆ. ನಾವು ಶುದ್ಧ ಮಾಂಸಹಾರಿಗಳು. ನಮ್ಮ ಆಹಾರ ಪದ್ಧತಿ ನಮ್ಮದು. ಈ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಈ ಹಿಂದೆ ಎಂದೂ ಜಟ್ಕಾ ಕಟ್ ಅನ್ನೋದನ್ನು ನಾವು ಕೇಳಿಲ್ಲ. ಹಲಾಲ್ ಬೇರೆಯಲ್ಲ, ನಾವು ಪ್ರಾಣಿ ಕತ್ತರಿಸೋದು ಬೇರೆಯಲ್ಲ. ಇಂತಹ ವಿವಾದ ಸೃಷ್ಟಿ ಮಾಡುವವರ ವಿರುದ್ಧ ಕ್ರಮವಹಿಸಿ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಇಮ್ರಾನ್ ರಾಜಕೀಯ ಭವಿಷ್ಯಕ್ಕೆ ಕುತ್ತು..ವೇಗದ ಬೌಲಿಂಗ್ನಿಂದಲೇ ವಿಕೆಟ್ ಉರುಳಿಸಲು ಖಾನ್ ಹೊಸ ತಂತ್ರ