ಮಂಡ್ಯ: ಇತ್ತೀಚೆಗಷ್ಟೇ ಮೈಸೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂಬ ಸಂಸದೆ ಸುಮಲತಾ ಅಂಬರೀಶ್ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಈ ಕುರಿತು ಮದ್ದೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ, ರಾಮನಗರ ಜಿಲ್ಲೆಯ ಯಾರೇ ಬಂದು ಹೇಳಿದರೂ ಕೆಲಸ ಮಾಡಿಕೊಡುತ್ತೇನೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಇಂಜಿನಿಯರ್ ಅಲ್ಲ, ನಾನು ಪತ್ರಿಕೋದ್ಯಮ ಓದಿರುವವನು. ಬೇರೆಯವರಿಗೆ ಏನೋ ಅವೈಜ್ಞಾನಿಕ ಅನಿಸಿರಬಹುದು. ಆದರೆ, ಈಗ ರಸ್ತೆಯಲ್ಲಿ ಜನ ಓಡಾಡುತ್ತಿದ್ದಾರೆ. ಓಡಾಡುತ್ತಿರುವವರೆಲ್ಲರೂ ರಸ್ತೆ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ನಿಂದ ಮುಂದುವರಿದ ಪೇಸಿಎಂ ಅಭಿಯಾನ: ಗ್ರಾಫಿಕ್ ವಿಡಿಯೋ ಬಿಡುಗಡೆ
ಪೇಸಿಎಂ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪೇ ಸಿಎಂ ಅಂದ್ರೆ ಪೇ ಕಾಂಗ್ರೆಸ್ ಮೇಡಂ ಅಂತ. ರಾಜಕಾರಣದಲ್ಲಿ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಹೊಡೆದಾಡಬೇಕು. ನಾನು ಜಾಸ್ತಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂಬ ಹಠ ಇರಬೇಕು. ಅದನ್ನು ಬಿಟ್ಟು ಜಾತಿ-ಜಾತಿ ಎತ್ತಿಕಟ್ಟುವುದು, ಇನ್ನೊಬ್ಬರನ್ನು ಅವಾಚ್ಯ ಶಬ್ದದಿಂದ ನಿಂದಿಸುವುದು. ಪರಸ್ಪರ ವೈಯಕ್ತಿಕ ನಿಂದನೆ ಮಾಡಿಕೊಳ್ಳುವುದು, ಇದೆಲ್ಲಾ ಹಳೆ ಕಾಲದಿಂದ ನಡೆದುಕೊಂಡು ಬಂದಿರುವ ರಾಜಕಾರಣ. ಈಗ ಕೂಡ ಕೆಲವರು ಅದನ್ನೇ ಮುಂದುವರಿಸುತ್ತಿದ್ದಾರೆ. ಜನರು ದಡ್ಡರಲ್ಲ, ಬುದ್ಧಿವಂತರಿದ್ದಾರೆ. ಜನರಿಗೆ ಅಭಿವೃದ್ಧಿ ಕೆಲಸ ಬೇಕು ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ನ ಪೇಸಿಎಂ ಅಭಿಯಾನಕ್ಕೆ ತಿರುಗೇಟು: ಕೈಪೇ ಕ್ಯೂಆರ್ ಕೋಡ್ ಬಿಡುಗಡೆ ಮಾಡಿದ ಬಿಜೆಪಿ
ಒಬ್ಬ ರೈತನು ಕೂಡ ತನ್ನ ಮಗ ವಿದ್ಯಾವಂತನಾಗಿ ಕೆಲಸಕ್ಕೆ ಸೇರಬೇಕು ಅಂತ ಬಯಸುತ್ತಾನೆ. ಮಕ್ಕಳ ಬಗ್ಗೆ ಯೋಚನೆ ಮಾಡಿ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಿ. ಅದನ್ನು ಬಿಟ್ಟು ಜಾತಿ, ಜಾತಿ ಅಂತಾ ಎತ್ತಿಕಟ್ಟಿ ಹೊಡೆದಾಡುವ ಕೆಲಸ ಮಾಡಬಾರದು. ಇದು ಮೋದಿ ಅವರ ಕಾಲ, ಅಭಿವೃದ್ಧಿಗಷ್ಟೇ ಮೊದಲ ಆದ್ಯತೆ. ಕಾಂಗ್ರೆಸ್‍ನವರು 5 ವರ್ಷ ಅಧಿಕಾರದಲ್ಲಿದ್ದರು. ಯಾವ ಘನ ಕಾರ್ಯ ಮಾಡಿದ್ದಾರೆ ಎಂಬುದನ್ನು ತೋರಿಸಲಿ. ಘನ ಕಾರ್ಯ ಮಾಡಿದ್ದರೆ ಕೇಳಿ. ಕಾಂಗ್ರೆಸ್‍ನವರು ಪೇ ಸಿಎಂ ಅಂತಾ ಮಾಡಿದ್ದಾರೆ. ಆ ಮೂಲಕ ಪೇ ಸಿಎಂ ಅಂದರೆ, ಪೇ ಕಾಂಗ್ರೆಸ್ ಮೇಡಂ ಅಂತ ಕಾಂಗ್ರೆಸ್‍ನವರೇ ಪ್ರೂವ್ ಮಾಡಿದ್ದಾರೆ. ವೈಯಕ್ತಿಕವಾಗಿ ಬಯ್ಯುವುದನ್ನು ಎಲ್ಲರೂ ನಿಲ್ಲಿಸಬೇಕು ಎಂದು ಹರಿಹಾಯ್ದಿದ್ದರು.