ಮಂಡ್ಯ : ಕಾವೇರಿಯಲ್ಲಿ ರಾಜಕಾರಣಿಗಳು ವೋಟ್ ಪಡೆದು ರೈತರ ಕತ್ತು ಕುಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಡ್ಯದಲ್ಲಿ ಚಿತ್ರನಟ ಜೋಗಿ ಪ್ರೇಮ್ ಹೇಳಿದ್ದಾರೆ. ಇಂದು ನಗರದಲ್ಲಿ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಪಾಲ್ಗೊಂಡ ನಟ, ನಿರ್ದೇಶಕ ಜೋಗಿ ಪ್ರೇಮ್, ಒಂದು ಕಾಲಕ್ಕೆ ಮಂಡ್ಯ ಅಂದ್ರೆ ಇಂಡಿಯಾ ಎನ್ನುವ ಮಾತಿತ್ತು. ಆದರೆ ಇಲ್ಲಿ ರಾಜಕಾರಣಿಗಳು ರೈತರ ಕತ್ತು ಕುಯ್ಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ತಮ್ಮ ನೂರಾರು ಅಭಿಮಾನಿಗಳ ಜೊತೆ ಸಂಜಯ ಸರ್ಕಲ್ನಿಂದ ಮೆರವಣಿಗೆ ಹೊರಟ ಜೋಗಿ ಪ್ರೇಮ್, ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಿ. ನಾವು ರೈತರ ಮಕ್ಕಳೇ. ಇವಾಗಲು ಎಮ್ಮೆ, ದನ ಸಾಕುತ್ತಿದ್ದೇನೆ. ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಮಂಡ್ಯದವರು ಡ್ರಾಮಾ ಮಾಡ್ಕೊಂಡು ಮಾತನಾಡಲ್ಲ. ಕುಡಿಯುವ ನೀರಿಗಾಗಿ ಹೋರಾಟ ಮಾಡ್ತಾರೆ ಎಂದರು.
ಮಂಡ್ಯ ಜಿಲ್ಲೆಯ ಜನರು ಬೆಂಗಳೂರಿಗೆ ನೀರು ಕೊಡ್ತಾರೆ. ಇದು ರಾಜಕೀಯ. ಯಾವುದೇ ಪಕ್ಷ ಯಾರೇ ಸಿಎಂ ಆದರೂ ರಾಜಕಾರಣ ಮಾಡ್ತಾರೆ. ಬಂಗಾರಪ್ಪ ಅವರು ಬಿಟ್ಟಿಲ್ಲ ಇವರು ಬಿಡಬಾರದಿತ್ತು. ಎಂಪಿ ಚುನಾವಣೆ ಬರ್ತಿದೆ. ರಾಜಕೀಯ ಮಾಡ್ತಾರೆ. ರೈತರ ಜೊತೆ ನಾವು ಸದಾ ಇರ್ತೇವೆ ಎಂದು ಹೇಳಿದರು.
ಮಂಡ್ಯ ಜನರನ್ನು ಹೊಗಳಿ ವೋಟ್ ಪಡೆದು ಕತ್ತು ಕುಯ್ಯುವ ಕೆಲಸ ಮಾಡ್ತಾರೆ. ತಕ್ಷಣವೇ ನೀರು ನಿಲ್ಲಿಸಿ ರೈತರನ್ನ ಉಳಿಸಿ ಎಂದು ಆಗ್ರಹಿಸಿದರು. ಎಂಪಿಗಳು ಎಸಿಯಲ್ಲಿ ಕುಳಿತ್ತಿದ್ದಾರೆ. ಅವರು ರಸ್ತೆಯಲ್ಲಿ ಕುಳಿತು ಹೋರಾಟ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತೆ. ನೀರನ್ನು ತಮಿಳುನಾಡಿನವರು ಕಿತ್ತುಕೊಂಡು ಹೊಗ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗೋಣಾ. ನಮ್ಮ ನೀರನ್ನ ನಾವು ಉಳಿಸಿಕೊಳ್ಳೋಣ ಎಂದರು.
ದರ್ಶನ್ ಅವರು ಎಲ್ಲಿದ್ದರೂ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಇರ್ತಾರೆ. ಒಳ್ಳೆಯ ಗುಣ ಇರುವ ವ್ಯಕ್ತಿ ದರ್ಶನ್. ಅವರ ಬಗ್ಗೆ ಯಾರೂ ಸಹ ಕೆಟ್ಟದಾಗಿ ಮಾತನಾಡಬೇಡಿ. ಕಾವೇರಿ ಅಂದ್ರೆ ಸದಾ ಅವರು ಮುಂದೆ. ಅದರಲ್ಲೂ ಮಂಡ್ಯ ವಿಷಯ ಅಂದ್ರೆ ನಮ್ಮೆಲ್ಲರಿಗೂ ಹೋರಾಟ ಮಾಡಲು ಹೇಳುವ ವ್ಯಕ್ತಿ. ದರ್ಶನ್ ಅವರ ಬಗ್ಗೆ ಯಾರು ಸುಮ್ಮನೆ ಮಾತನಾಡಬಾರದು ಎಂದಿದ್ದಾರೆ.
ಹಾಸನದಲ್ಲಿ ಕಾವೇರಿ ಕಿಚ್ಚು: ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಬೇಕು ಅಂತ ಕರ್ನಾಟಕ ಬಂದ್ಗೆ ಕೊಟ್ಟಿರುವ ಕರೆ ಹಿನ್ನೆಲೆಯಲ್ಲಿ ಹಾಸನದಲ್ಲೂ ಕಾವೇರಿ ಕಿಚ್ಚು ಹೆಚ್ಚಾಗಿದೆ. ಪ್ರತಿಭಟನಾ ನಿರತರನ್ನು ಪೊಲೀಸರು ಬಲವಂತವಾಗಿ ಎಳೆದೊಯ್ಯುವ ಮೂಲಕ ವಶಕ್ಕೆ ಪಡೆದಿರುವ ಘಟನೆ ಕೂಡ ನಡೆದಿದೆ.
ಬೆಳಗ್ಗೆಯಿಂದಲೇ ಹಾಸನದಲ್ಲಿ ಸುಮಾರು 57ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಭಾಗಶಃ ಬಂದ್ ಯಶಸ್ವಿಯಾಗಿದೆ. ಬೆಳಗ್ಗೆಯಿಂದಲೇ ಬಸ್ ಸಂಚಾರ ಎಂದಿನಂತೆ ಸಾಗುತ್ತಿದ್ದು, ಪ್ರತಿಭಟನಾಕಾರರು ಬಸ್ ನಿಲ್ದಾಣಕ್ಕೆ ತೆರಳಿ ಸಾರಿಗೆ ಬಸ್ ಸಂಚಾರ ತಡೆಯಲು ಮುಂದಾದರು. ಈ ವೇಳೆ ಡಾ. ರಾಜ್ಕುಮಾರ್ ಸಂಘಟನೆಯ ಅಧ್ಯಕ್ಷ ಬಾಳ್ಳು ಗೋಪಾಲ್ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ ಬಸ್ ಮುಂಭಾಗದಲ್ಲಿ ಮಲಗಿ ಪ್ರತಿಭಟನೆಗೆ ತಮ್ಮ ಕಾರ್ಯಕರ್ತರೊಂದಿಗೆ ಮುಂದಾದರು.
ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ವಿಫಲವಾದ ಹಿನ್ನೆಲೆ ಪೊಲೀಸರು ಪ್ರತಿಭಟನೆಗೆ ಮುಂದಾಳತ್ವ ವಹಿಸಿದ್ದ ಬಾಳ್ಳು ಗೋಪಾಲ್ ಅವರನ್ನ ಬಲವಂತವಾಗಿ ಮತ್ತೆ ವಶಕ್ಕೆ ಪಡೆದರು.
ಇನ್ನು ಪೊಲೀಸರ ಈ ನಡೆಯನ್ನ ಖಂಡಿಸಿ ಪ್ರತಿಭಟನಾಕಾರರು 'ಕಾವೇರಿ, ಕಾವೇರಿ, ಕಾವೇರಿ' ಅಂತ ಕೂಗುವ ಮೂಲಕ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರ ಬಂದ್ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಕರ್ನಾಟಕ ಬಂದ್ಗೆ ಹಾಸನದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಪ್ರತಿಭಟನೆಗೆ 57 ಸಂಘಟನೆಗಳಿಂದ ಬೆಂಬಲ ಸಿಕ್ಕಿದೆ. ಆದರೆ, ಎಂದಿನಂತೆ ಹೂವಿನ ವ್ಯಾಪಾರದಲ್ಲಿ ತೊಡಗಿದ ವ್ಯಾಪಾರಸ್ಥರು ಮತ್ತು ವ್ಯಾಪಾರಿಗಳಿಗೆ ಬಂದ್ ಬಿಸಿ ತಟ್ಟಲಿಲ್ಲ. ಕೆಲವು ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿ ಎಂದು ಕೈ ಮುಗಿದು ಕೇಳಿದರೂ ಬಂದ್ ಮಾಡದೆ ಎಂದಿನಂತೆ ತಮ್ಮ ವ್ಯಾಪಾರದಲ್ಲಿ ತೊಡಗಿದರು.
ಹಾಸನ ಜಿಲ್ಲೆ ಸೇರಿದಂತೆ ಸಕಲೇಶಪುರ, ಬೇಲೂರು, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಸೀಕೆರೆ, ಆಲೂರು ಭಾಗದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವು ಸಂಘಟನೆಗಳು ಮಾತ್ರ ಬೀದಿಗೆ ಇಳಿದು ಹೋರಾಟ ಮಾಡಿದರೆ ಇನ್ನುಳಿದಂತೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ತಮ್ಮ ವ್ಯಾಪಾರದಲ್ಲಿ ತೊಡಗಿದ್ದವು.
ಕರ್ನಾಟಕ ಬಂದ್- ಕೃಷ್ಣ ತೀರದಲ್ಲಿ ಪ್ರತಿಭಟನೆಗೆ ಸೀಮಿತ: ರಾಜ್ಯ ಸರ್ಕಾರ ಕಾವೇರಿ ನೀರು ತಮಿಳುನಾಡಿಗೆ ಬಿಡುಗಡೆ ವಿಚಾರವಾಗಿ ಇವತ್ತು ವಿವಿಧ ಸಂಘಟನೆಗಳು, ಕರ್ನಾಟಕ ಬಂದ್ಗೆ ಕರೆ ನೀಡಿರುವ ಬೆನ್ನಲ್ಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದ್ದು, ದಿನದಂತೆ ವ್ಯಾಪಾರ ವಹಿವಾಟು, ವಾಹನ ಸಂಚಾರ, ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದವು.
ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಚಿಕ್ಕೋಡಿ ಪ್ರವಾಸ ಮಂದಿರದಿಂದ ಬಸವೇಶ್ವರ ರಥದವರೆಗೆ ಸರ್ಕಾರದ ಅಣಕು ಶವಯಾತ್ರೆಯನ್ನು ನಡೆಸಿ ಬೊಬ್ಬೆ ಹಾಕಿ ಸರ್ಕಾರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಚಿಕ್ಕೋಡಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾಕಾರರು ಕೆಲವು ವಾಹನಗಳನ್ನು ತಡೆಗಟ್ಟಿ ಸರ್ಕಾರಗಳ ವಿರುದ್ಧ ಕಿಡಿ ಕಾರಿದರು. ಅಥಣಿ ಪಟ್ಟಣದಲ್ಲಿ ಕರವೇ ತಾಲೂಕು ಅಧ್ಯಕ್ಷ ಉದಯ್ ಮಕಾಣಿ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ, ಕೆಲವು ಕಾಲ ಪ್ರತಿಭಟನೆ ಮಾಡಿ, ತಹಶೀಲ್ದಾರ್ ರಾಜೇಶ್ ಬುರ್ಲಿ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರವೇ ಚಿಕ್ಕೋಡಿ ತಾಲೂಕು ಅಧ್ಯಕ್ಷ ಕೃಷ್ಣ ಕೆಂಚ್ನವರ್ ಮಾತನಾಡಿ, ಕಾವೇರಿ ವಿಚಾರದಲ್ಲಿ ಸರ್ಕಾರ ಮಲತಾಯಿ ಧೋರಣೆಯನ್ನು ಕೈಬಿಡಬೇಕು. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಇಂಥ ಸಂದರ್ಭದಲ್ಲಿ ಬೇರೆಯವರಿಗೆ ನೀರು ಹರಿಸುವುದು ಎಷ್ಟು ಸೂಕ್ತ?. ನಮಗೆ ಕುಡಿಯುವುದಕ್ಕೂ ನೀರಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ, ಬೆಳೆಗಳಿಗೆ ಸರ್ಕಾರ ನೀರು ಹರಿಸುತ್ತಿದೆ. ಸರ್ಕಾರ ಕೂಡಲೇ ನೀರು ಹರಿಸುವುದನ್ನು ನಿಲ್ಲಿಸಬೇಕು. ನಾವು ಇವತ್ತು ಸರ್ಕಾರದ ಅಣಕು ಶವಯಾತ್ರೆಯನ್ನು ಮಾಡಿದ್ದೇವೆ. ಮುಂದೆ ಇದೇ ರೀತಿ ಮುಂದುವರೆದರೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಕುರುಬೂರು, ಮುಖ್ಯಮಂತ್ರಿ ಚಂದ್ರು ನೇತೃತ್ವದ ನಿಯೋಗ: ಸಂಜೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಎಂದ ಸಿದ್ದರಾಮಯ್ಯ