ಮಂಡ್ಯ: ನೂತನ ಸಂಸದೆ ಸುಮಲತಾ ಅಂಬರೀಶ್ ನಿನ್ನೆಯಷ್ಟೇ ಸ್ವಾಭಿಮಾನದ ವಿಜಯೋತ್ಸವ ಆಚರಣೆ ಮಾಡಿದ್ದಾರೆ. ಈ ಸಮಾವೇಶದ ಬೆನ್ನಲ್ಲೇ ರಾಜಕೀಯ ಮುಖಂಡರು, ಅಂಬಿ ಹಿತೈಷಿಗಳು ನಿಯೋಜಿತ ಸಂಸದೆಗಳ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಲಹೆಗಳನ್ನು ನೀಡುತ್ತಿದ್ದಾರೆ.
ನಟ, ಮಾಜಿ ಸಚಿವ ಅಂಬರೀಶ್ ಜೊತೆ ಕೆಲವು ಮುಖಂಡರು ಗುರುತಿಸಿಕೊಂಡಿದ್ದರು. ಆದರೆ ಕೊನೆಗಾಲದಲ್ಲಿ ಕೈಕೊಟ್ಟ ಈ ಮುಖಂಡರಿಂದ ಅಂಬಿಗೆ ರಾಜಕೀಯವಾಗಿ ಹಿನ್ನೆಡೆಯೂ ಆಗಿತ್ತು. ಅಂಬಿ ರಾಜಕೀಯ ಜೀವನದ ಚಿರಿತ್ರೆ ಕಣ್ಣ ಮುಂದೆಯೇ ಇದ್ದು, ಎಚ್ಚರಿಕೆ ವಹಿಸುವಂತೆ ಸಲಹೆಗಳು ಬಂದಿವೆ.
ಹೊಗಳುಭಟ್ಟರು, ಅಧಿಕಾರ ಇದ್ದಾಗ ಜೊತೆ ಬರುವವರಿಂದ ದೂರವಿರಿ. ಗೆಲುವಿಗೆ ಶ್ರಮಿಸಿದ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗಿ ಹಾಗೂ ಕೇವಲ ಹೊಗಳುಭಟ್ಟರಿಗೆ ಅವಕಾಶ ನೀಡಿದರೆ ನಿಮಗೂ ರಾಜಕೀಯ ಹಿನ್ನೆಡೆ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ಸಲಹೆಗಳು ಕ್ಷೇತ್ರದಾದ್ಯಂತ ಕೇಳಿ ಬಂದಿದೆ.
ಕೆಲವರು ಅಂಬಿ ಇದ್ದಾಗ ಎಲ್ಲವನ್ನೂ ಪಡೆದುಕೊಂಡರು. ನಂತರ ಕೊನೆಗಾಲದಲ್ಲಿ ಅವರು ದೂರವಾದರು. ಈಗ ಮತ್ತೆ ಕೆಲವರು ಸುಮಲತಾ ಜೊತೆ ಸೇರಿಕೊಂಡಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬಂದಿವೆ. ಅಭಿಮಾನದ ಜೊತೆಗೆ ರಾಜಕೀಯ ಭವಿಷ್ಯಕ್ಕೂ ಸುಮಲತಾ ಅಂಬರೀಶ್ ಎಚ್ಚರಿಕೆ ಹೆಜ್ಜೆ ಇಡಬೇಕು ಎಂಬ ಸಲಹೆಗಳನ್ನು ರಾಜಕೀಯ ಮುಖಂಡರು, ಅಂಬಿ ಆಪ್ತರು ನೀಡಿದ್ದಾರೆ.