ಮಂಡ್ಯ: ಸ್ವಾಭಿಮಾನಿ ಮಂಡ್ಯಕ್ಕಾಗಿ 250 ಕಿ.ಮೀ ಪಾದಯಾತ್ರೆ ಆರಂಭವಾಗಿದೆ. ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ವೈದ್ಯ, ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಪಾದಯಾತ್ರೆ ಶುರು ಮಾಡಿದ್ದಾರೆ. ಮಂಡ್ಯಜಿಲ್ಲೆಯ ಸ್ವಾಭಿಮಾನಕ್ಕಾಗಿ ಎಂಬ ಘೋಷ ವಾಕ್ಯದೊಂದಿಗೆ13 ದಿನದ ಈ ಪಾದಯಾತ್ರೆ ಶುರುವಾಗಿದೆ.
ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ, ಮುಖಂಡ ಕೆ.ಎಸ್. ನಂಜುಂಡೇಗೌಡ, ಮಾಜಿ ಶಾಸಕ ಹೆಚ್.ಬಿ.ರಾಮು ಪಾದಯಾತ್ರೆಗೆ ಚಾಲನೆ ನೀಡಿದರು. ಇದಕ್ಕೂ ಮೊದಲು ಡಾ. ರವೀಂದ್ರ ಚಲುವನಾರಾಯಣಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ತಂದೆ-ತಾಯಿ ಆಶೀರ್ವಾದ ಪಡೆದು ಪಾದಯಾತ್ರೆ ಆರಂಭಿಸಿದರು.
ಪಾದಯಾತ್ರೆಗೆ ಶುಭಕೋರಿ ದೃಷ್ಟಿ ಕಾಯಿಯನ್ನು ಅಭಿಮಾನಿಯೊಬ್ಬ ಒಡೆದ ನಂತರ ಮೇಲುಕೋಟೆಯಿಂದ ಯಾತ್ರೆ ಆರಂಭ ಮಾಡಲಾಯಿತು. ಪ್ರತಿ ನಿತ್ಯ ಸುಮಾರು 35 ಕಿಮೀ ಯಾತ್ರೆ ನಡೆಯಲಿದ್ದು, 100ಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ನಿಖಿಲ್ ಸ್ಪರ್ಧೆ ವಿರುದ್ಧ ಜನಜಾಗೃತಿಗಾಗಿ ಯಾತ್ರೆ :
ಸ್ವಾಭಿಮಾನಿ ಮಂಡ್ಯ ಹಾಗೂ ಜಾಗೃತಿಗಾಗಿ ಯಾತ್ರೆ ಮಾಡ್ತಿರೋದಾಗಿ ಡಾ. ರವೀಂದ್ರ ಈಟಿವಿ ಭಾರತ್‌ಗೆ ತಿಳಿಸಿದರು. ಸಂವಿಧಾನದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ, ದೇವೇಗೌಡರು, ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದರೆ ನಮ್ಮ ವಿರೋಧ ಇರಲಿಲ್ಲ. ಆದರೆ, ಯಾವುದೇ ಸಂಘಟನೆ ಮಾಡದ ನಿಖಿಲ್ ಇಲ್ಲಿ ಸ್ಪರ್ಧೆ ಮಾಡಿರುವುದಕ್ಕೆ ವಿರೋಧವಿದೆ ಎಂದರು.
ನಟನಾಗಿ ನಿಖಿಲ್ ಬಗ್ಗೆ ಮೆಚ್ಚುಗೆ ಇದೆ. ಆದರೆ, ರಾಜಕಾರಣಿಯಾಗಿ ಅಲ್ಲ. ಜಿಲ್ಲೆಯ ಅಭಿವೃದ್ಧಿಗೆ ನಿಖಿಲ್ ಅಂತಾರೆ. ಹಾಗಾದರೆ ಈಗ ಗೆದ್ದಿರುವ ಜನ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು. ಜನರಲ್ಲಿ ಜಾಗೃತಿ ಮೂಡಿದೆ. ಅದರ ಜೊತೆಗೆ ಮತ್ತಷ್ಟು ಜಾಗೃತಿ ಮೂಡಿಸಿ, ನಮ್ಮ ಜಿಲ್ಲೆಯ ನಾಯಕರ ಬಗ್ಗೆ ತಿಳಿಸಲಾಗುವುದು. ನಮ್ಮ ಜಿಲ್ಲೆಯವರು ಜೆಡಿಎಸ್‌ನಲ್ಲಿ ಸಮರ್ಥರಿದ್ದರೂ ನಿಖಿಲ್ನನ್ನು ತರಲಾಗಿದೆ. ನಮಗಿಂತ ಮೊದಲೇ ಜೆಡಿಎಸ್‌ನವರಲ್ಲಿ ಜಾಗೃತಿ ಮೂಡಬೇಕಾಗಿತ್ತು ಎಂದರು.