ಮಂಡ್ಯ: ಸರ್ಕಾರಿ ಉರ್ದು ಶಾಲೆಯ ಜಾಗವನ್ನು ಅಕ್ರಮವಾಗಿ ಧಾರ್ಮಿಕ ಸ್ಥಳವನ್ನಾಗಿ ಪರಿವರ್ತಿಸಿಕೊಂಡು ಧರ್ಮಗುರುವೊಬ್ಬರು ವಾಸ್ತವ್ಯ ಹೂಡಿದ್ದ ಸ್ಥಳಕ್ಕೆ ತಹಶೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಿನ್ನೆ ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಅಕ್ರಮ ವಾಸ್ತವ್ಯ ಹೂಡಿದ್ದ ಮುಸ್ಲಿಂ ಮೌಲ್ವಿಯನ್ನು ತೆರವುಗೊಳಿಸಿದರು.
ಈ ಕುರಿತು ಈಟಿವಿ ಭಾರತ 'ಮಂಡ್ಯ: ಧಾರ್ಮಿಕ ಚಟುವಟಿಕೆಗೆ ಸರ್ಕಾರಿ ಶಾಲೆ ಆಕ್ರಮಿಸಿಕೊಂಡ ಧಾರ್ಮಿಕ ಗುರು?' ಎಂಬ ವರದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತು ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ದಾಖಲೆಗಳನ್ನು ಪರಿಶೀಲನೆ ಮಾಡಿದರು.
ನಂತರ ಜಾಗವನ್ನು ಆಕ್ರಮ ಮಾಡಿಕೊಂಡಿರುವುದು ಕಂಡು ಬಂದಿದ್ದು ಧರ್ಮಗುರುಗೆ ಬುದ್ದಿ ಹೇಳಿ, ಸರ್ಕಾರಿ ಅಧೀನದಲ್ಲಿರುವ ಯಾವುದೇ ಕಟ್ಟಡಕ್ಕೆ ಪ್ರವೇಶ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು. ಜೊತೆಗೆ ಅವರ ಬಳಿಯಿದ್ದ ಬಿಸಿಯೂಟ ಯೋಜನೆ ಸಾಮಗ್ರಿಗಳು ಸೇರಿದಂತೆ ಶಾಲಾ ಸಾಮಗ್ರಿಗಳನ್ನು ಮರುವಶಕ್ಕೆ ಪಡೆದರು.