ಮಂಡ್ಯ: ಜಿಲ್ಲೆಯಲ್ಲಿ ಯಾರಿಗೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಕೇಂದ್ರದ ನಿಯಮಾವಳಿಯಂತೆ ವಿದೇಶದಿಂದ ಇಬ್ಬರು ಬಂದ ಹಿನ್ನಲೆಯಲ್ಲಿ ಇಬ್ಬರನ್ನೂ ಐಸೋಲೇಷನ್ ವಾರ್ಡ್ ನಲ್ಲಿ ನಿಗಾಕ್ಕೆ ಇಡಲಾಗಿದೆ. ಇದರಲ್ಲಿ ಓರ್ವ ಟೆಕ್ಕಿ ಇದ್ದು, ಆತನ ಮನವಿ ಮೇರೆಗೆ ಚಿಕಿತ್ಸೆ ನೀಡಿ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ನಾಗಮಂಗಲ ಪಟ್ಟಣದ ಮಹಿಳೆ ಫೆ.15 ರಂದು ಜಿದ್ದಾಗೆ ತೆರಳಿದ್ದರು. ನಂತರ ಬೆಂಗಳೂರಿಗೆ ವಾಪಸ್ ಆಗಿದ್ದರು. ಆ ಮಹಿಳೆಗೆ ಕಲಬುರಗಿಯ ಮೃತ ವೃದ್ಧ ಮಹಮ್ಮದ್ ಸಿದ್ದಕಿ ಜೊತೆ ಯಾವುದೇ ಸಂಪರ್ಕ ಇರಲಿಲ್ಲ. ಅವರ ಜೊತೆ ಪ್ರಯಾಣ ಕೂಡ ಮಾಡಿಲ್ಲ, ಮಹಿಳೆ ಆರೋಗ್ಯವಾಗಿದ್ದಾರೆ. ಕೇಂದ್ರದ ನಿಯಾಮವಳಿ ಪ್ರಕಾರ ನಿಗಾ ಇಡಲಾಗಿದೆ. ಇಂದು ಸಂಜೆ ವರದಿ ಬರಲಿದ್ದು, ಮಹಿಳೆ ಜೊತೆ 7 ಜನ ಸೌದಿಯಿಂದ ಬಂದಿದ್ದಾರೆ. ಯಾರಿಗೂ ಆರೋಗ್ಯ ಸಮಸ್ಯೆ ಇಲ್ಲ. ಹದಿನಾಲ್ಕು ದಿನ ನಿಗಾ ವಹಿಸಲಾಗಿತ್ತು ಎಂದಿದ್ದಾರೆ.
ಥೈಲ್ಯಾಂಡ್ ಮುಖಾಂತರ ಮೆಲ್ಬೋರ್ನ್ ಗೆ ತರಬೇತಿಗೆ ಹೋಗಿದ್ದ ಶ್ರೀರಂಗಪಟ್ಟಣ ಮೂಲದ ವ್ಯಕ್ತಿಗೆ ಆತನ ಮನವಿ ಮೇರೆಗೆ ಸ್ಕ್ರೀನಿಂಗ್ ಮಾಡಲಾಗಿದ್ದು, ಮೂರು ದಿನಗಳಿಂದ ಕೆಮ್ಮು ಇದೆ. ಗಂಟಲಿನ ದ್ರವದ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿತ್ತು, ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ವಿದೇಶದಿಂದ ಬಂದ 30 ಜನರ ಮೇಲೆ ಸಂಪೂರ್ಣ ನಿಗಾ ವಹಿಸಲಾಗಿದೆ. ಪ್ರತಿ ದಿನ ವರದಿ ತರಿಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲವೆಂದು ಅವರು ಅಭಯ ನೀಡಿದ್ದಾರೆ.