ಮಂಡ್ಯ: ಕೋವಿಡ್ ಮಹಾಮಾರಿಗೆ ಪತಿ ಬಲಿಯಾಗಿದ್ದು, ಇದರಿಂದ ಮನನೊಂದ ಪತ್ನಿಯೂ ಸಹ ಆತ್ಮಹತ್ಯೆಗೆ ಶರಣಾಗಿ ಸಾವಿನಲ್ಲೂ ದಂಪತಿಗಳು ಒಂದಾಗಿರುವ ಹೃದಯ ವಿದ್ರಾವಕ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಓದಿ: ಗರ್ಭಿಣಿ ಯುವ ಸಬ್ ಇನ್ಸ್ಪೆಕ್ಟರ್ ಮಾರಕ ಕೋವಿಡ್ಗೆ ಬಲಿ... ಕಂಬನಿ ಮಿಡಿದ ಇಲಾಖೆ!
ಬೊಮ್ಮೇನಹಳ್ಳಿ ಗ್ರಾಮದ ಕಿರಣ್-ಪೂಜಾ ಎಂಬ ದಂಪತಿಗಳೇ ಸಾವನ್ನಪ್ಪಿರುವ ದುರ್ದೈವಿಗಳಾಗಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಕಿರಣ್ ಕಳೆದ ಹನ್ನೊಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕಳೆದ ಹತ್ತು ದಿನಗಳ ಹಿಂದೆ ಕೋವಿಡ್ ಸೋಂಕು ತಗುಲಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕಿರಣ್ ಮೃತಪಟ್ಟಿದ್ದಾರೆ.
ಕಿರಣ್ ಅವರ ಪಾರ್ಥಿವ ಶರೀರವನ್ನು ಕೋವಿಡ್ ನಿಯಮಗಳಂತೆ ಬೊಮ್ಮೇನಹಳ್ಳಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅಂತ್ಯಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದ ಪೂಜಾ ಗಂಡ ಸಾವನ್ನು ನೋಡಲಾಗದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳು ಮದುವೆಯಾಗಿ ಸಂತೋಷವಾಗಿ ಜೀವನ ನಡೆಸಲಿ ಎಂದು ಮದುವೆ ಮಾಡಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.