ಮಂಡ್ಯ: ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಚೀಟಿ ಅಕ್ರಮ ಪರಿಷ್ಕರಣೆ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಆರ್ಎಸ್ಎಸ್ ಸಂಸ್ಥೆ ವಾಮಮಾರ್ಗದಲ್ಲಿ ಮುಂಬರುವ ಚುನಾವಣೆ ಗೆಲ್ಲಲು ಸಂಚು ರೂಪಿಸಿವೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎನ್.ಚೆಲುವರಾಯಸ್ವಾಮಿ ಗಂಭೀರ ಆರೋಪ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಾಗೂ ಆರ್ಎಸ್ಎಸ್ ಸಂಸ್ಥೆ ಮತ್ತು ಬಿಜೆಪಿ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಲು ಹೊರಟಿವೆ ಎಂದು ದೂರಿದರು. ಚಿಲುಮೆ ಸಂಸ್ಥೆಯು ರಾಜ್ಯಮಟ್ಟದಲ್ಲಿ ಒಂದು ದೊಡ್ಡ ಮಾಫಿಯಾ ನಡೆಸಿ, ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಕೆಲಸ ಮಾಡುತ್ತಿದೆ.
ಅಕ್ರಮ ಮತದಾರರ ಪಟ್ಟಿಯನ್ನು ತಯಾರಿಸಿ ತಮಗೆ ಬೇಕಾದವರಿಗೆ ವೋಟ್ ಹಾಕಿಸಿಕೊಳ್ಳುವ ಪ್ರಯತ್ನ ನಡೆದಿದೆ. ಬಿಜೆಪಿಗೆ ವೋಟ್ ಹಾಕುವವರ ಪಟ್ಟಿ ನಡೆದಿದೆ. ಬಿಜೆಪಿಗೆ ವೋಟ್ ಹಾಕುವವರನ್ನು ಪಟ್ಟಿಗೆ ಸೇರ್ಪಡೆ ಮಾಡಿಕೊಂಡು ಪರ್ಸೆಂಟೇಜ್ ಅನ್ನ ವ್ಯತ್ಯಾಸ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟ್ಟಿದ್ದರು ಎಂದು ದೂರಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಾಕ್ಷಿ ಸಮೇತವಾಗಿ ಈ ವಿಚಾರದ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ, ಚಿಲುಮೆ ಸಂಸ್ಥೆಯು ಒಬ್ಬ ಮಂತ್ರಿಗೆ ಸಂಬಂಧಪಟ್ಟ ಸಂಸ್ಥೆ ಆಗಿರುವುದರಿಂದ ಬಹುಶಃ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಭಯೋತ್ಪಾದನೆ ಕಾಂಗ್ರೆಸ್‌ನ ಪಾಪದ ಕೂಸು; ಬಿಜೆಪಿ ಶಾಸಕ ಪಿ ರಾಜೀವ್ ಆರೋಪ