ಮಂಡ್ಯ: ಮೈ ಶುಗರ್ ಕಂಪನಿ ಉಳಿವಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಹಣ ನೀಡಿದೆ. ಆದ್ರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಅಲ್ಲದೇ ಕಂಪನಿಗೆ ಕೋಟ್ಯಂತರ ರೂಪಾಯಿ ಆದಾಯ ಬರುವ ಆಸ್ತಿಗಳು ಇವೆ ಎನ್ನಲಾಗಿದೆ.
ಹೌದು, ಮೈ ಶುಗರ್ ಕಂಪನಿ ಆರಂಭದಲ್ಲೇ ಮೈಸೂರು ಸಂಸ್ಥಾನ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ನೀಡಿತ್ತು. ಬೆಂಗಳೂರು ಸೇರಿದಂತೆ ಮಂಡ್ಯ ಸಮೀಪವೂ ಆಸ್ತಿ ಇದೆ. 50 ಎಕರೆ ಕೃಷಿ ಭೂಮಿ ಸೇರಿದಂತೆ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ 25 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನು ಇದೆ ಎನ್ನಲಾಗಿದೆ. ಆದರೆ ಈ ಜಮೀನಿನ ಉಪಯೋಗ ಕಂಪನಿಗೆ ಸಿಗುತ್ತಲೇ ಇಲ್ಲ. ಕೃಷಿ ಭೂಮಿಯಲ್ಲಿ ವಿವಿಧ ತಳಿಯ ಕಬ್ಬನ್ನು ಬೆಳೆಯಲಾಗುತ್ತಿದೆ. ಜಮೀನಿನಲ್ಲಿ ಇರುವ 500ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಹರಾಜು ಹಾಕಿ ಎಳನೀರು ಮಾರಾಟ ಮಾಡಲಾಗುತ್ತಿದೆ. ಆದರೆ ಇದರ ಆದಾಯ ಕೇವಲ 2 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.
ಬೆಂಗಳೂರು-ಮೈಸೂರು ಹೆದ್ದಾರಿಗೆ ಹೊಂದಿಕೊಂಡಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ಪಾಳು ಬಿದ್ದಿದೆ. ಸುಮಾರು10 ಎಕರೆಗೂ ಹೆಚ್ಚು ಜಮೀನು ಒತ್ತುವರಿಯಾಗಿದೆ. ಆದರೂ ಅಧಿಕಾರಿಗಳು ಇದು ತಮ್ಮದೇ ಜಮೀನು ಎಂಬುದನ್ನು ಮರೆತಂತಿದೆ. ಒಂದೊಮ್ಮೆ ಈ ಜಮೀನಿನಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಿದರೆ ವರ್ಷಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರೋದ್ರಲ್ಲಿ ಅನುಮಾನವೇ ಎಲ್ಲ ಎನ್ನುತ್ತಾರೆ ರೈತರು.