ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಇಂದು (ಸೋಮವಾರ) ಬಿಜೆಪಿ ಕಾರ್ಯಕರ್ತರು, ರೈತರು ರಸ್ತೆ ತಡೆದು ಪ್ರತಿಭಟಿಸಿದರು. ''ಕಾವೇರಿ ನಮ್ಮದು, ಕಾವೇರಿ ನೀರು ತಮಿಳುನಾಡಿಗೆ ಬಿಟ್ಟಿರುವುದು ಅನ್ಯಾಯ'' ಎಂದು ಕಿವಿ ಮೇಲೆ ಹೂ ಇಟ್ಟುಕೊಂಡು ರಾಜ್ಯ ಸರ್ಕಾರವನ್ನು ಅಣಕಿಸಿದರು. ಇದೇ ಸಂದರ್ಭದಲ್ಲಿ ಹುರುಳಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಬೆಳೆ ಬಿಟ್ಟು ಅರೆ ಖುಷ್ಕಿ ಬೆಳೆ ಬೆಳೆಯುವಂತೆ ಕೃಷಿ ಸಚಿವ ಚಲುವರಾಯ ಸ್ವಾಮಿ ರೈತರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರು ಭತ್ತ, ಕಬ್ಬು ಬಿಟ್ಟು ಹುರುಳಿ ಬೆಳೆಯಬೇಕಾ? ಎಂದು ಹುರುಳಿ ಚೆಲ್ಲಿ ಕಿಡಿಕಾರಿದರು. ಹುರುಳಿ ಭಿತ್ತನೆ ಮಾಡಲು ಸೇರಿನಲ್ಲಿ ಅಳೆದು ಪ್ಯಾಕ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಸಂಸದೆ ಸುಮಲತಾ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿ, ''ಒಬ್ಬ ತಾಯಿ ತನ್ನ ಮಕ್ಕಳನ್ನು ಉಪವಾಸ ಇಟ್ಟು ಪಕ್ಕದ ಮನೆಯ ಮಕ್ಕಳಿಗೆ ಊಟ ಕೊಡಲ್ಲ. ಕೇಂದ್ರದಲ್ಲಿ ಕಾವೇರಿ ವಿಚಾರವನ್ನು ಮೊದಲು ಧ್ವನಿ ಎತ್ತಿದ್ದೇ ನಾನು. ನಮ್ಮ ರೈತರಿಗೆ ಅನ್ಯಾಯ ಆಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ನಮ್ಮಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಳ್ಳದೇ ಯಾವ ರೀತಿ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ? ನೀರು ಹಂಚಿಕೆ ಮಾಡಿರುವುದಕ್ಕೆ ಒಂದು ಸ್ಪಷ್ಟತೆಯಿಲ್ಲ. ಕಾವೇರಿ ನೀರಿನ ಸಮಸ್ಯೆ ಬಂದಾಗ, ಎಲ್ಲಾ ಕಡೆಗಳಲ್ಲೂ ಮಾತನಾಡಿದ್ದೇವೆ. ಪ್ರತಿ ಬಾರಿ ತಮಿಳುನಾಡು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ. ನಮ್ಮ ಕಡೆಯಿಂದ ಸರಿಯಾಗಿ ನೀರು ಹಂಚಿಕೆ ಮಾಡುವುದರಲ್ಲಿ ವಿಫಲರಾಗಿದ್ದೇವೆ. ಯಾವ ಪ್ರಯತ್ನವನ್ನೂ ಮಾಡದೇ ತಮಿಳುನಾಡಿನವರು ಅರ್ಜಿ ಹಾಕಿದ ತಕ್ಷಣವೇ ನೀರು ಬಿಟ್ಟರೆ ರೈತರ ಗತಿ ಏನು?.''
''ನಮ್ಮ ರೈತರ ಹಿತವನ್ನು ಕಾಪಾಡಬೇಕು. ಕೇಂದ್ರ ಸರ್ಕಾರ ಇದರಲ್ಲಿ ಪ್ರವೇಶ ಮಾಡಿಲ್ಲ. ರಾಜ್ಯ ಸರ್ಕಾರ ಕಾವೇರಿ ವಿಚಾರದಲ್ಲಿ ಸುಳ್ಳು ಹೇಳ್ತಿದೆ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾವೇರಿ ಸಮಸ್ಯೆ ಇತ್ತು. ಆಗಲೂ ಸುಪ್ರೀಂ ಕೋರ್ಟ್ ನೆಪ ಹೇಳಿ ತಮಿಳುನಾಡಿಗೆ ನೀರು ಕೊಟ್ಟಿದ್ದರು. ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ಆಗ ಅಂಬರೀಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇದನ್ನು ಪರಿಹಾರ ಮಾಡೋದಾಗಿದ್ರೆ ಆವಾಗ್ಲೇ ಮಾಡಬಹುದಿತ್ತು" ಎಂದು ಹೇಳಿದರು.
"ಕಾವೇರಿ ಪ್ರಾಧಿಕಾರದಲ್ಲಿ ತಮಿಳುನಾಡಿನ ಧ್ವನಿ ಹೆಚ್ಚಾಗಿ ಕೇಳ್ತಿದೆ. ಕೆಆರ್ಎಸ್ ಡ್ಯಾಂನಿಂದ ಹೂಳೆತ್ತುವುದಕ್ಕೂ ತಮಿಳುನಾಡಿನವರು ತಡೆಯುತ್ತಾರೆ. ಆದ್ರೆ ನಾವು ಸುಮ್ಮನಿರಬೇಕಾಗುತ್ತೆ. ಕೆಆರ್ಎಸ್ನಲ್ಲಿ ಹೂಳೆತ್ತಿದ್ರೆ ಹೆಚ್ಚು ನೀರು ಸಂಗ್ರಹ ಮಾಡಬಹುದು. ಅದಕ್ಕೂ ತಮಿಳುನಾಡು ಒಪ್ಪಲ್ಲ. ನಾವು ಹೂಳೆತ್ತಿದ್ರೆ ತಮಿಳುನಾಡು ಕ್ಯಾತೆ ತೆಗೆಯುತ್ತೆ, ಕರ್ನಾಟಕಕ್ಕೆ ಹೆಚ್ಚು ನೀರು ಸಿಗುತ್ತೆ ಅಂತ. ಪ್ರತಿ ಬಾರಿ ನಮ್ಮ ರೈತರಿಗೆ ಅನ್ಯಾಯ ಹಾಗುತ್ತೆ ತಡೆಯಬೇಕು" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ಕೋರ್ ಕಮಿಟಿ ಸಭೆ ಆರಂಭ: ಲೋಕಸಭೆ ಚುನಾವಣೆ ಸೇರಿ ಮಹತ್ವದ ವಿಷಯಗಳ ಚರ್ಚೆ