ಮಂಡ್ಯ: ನಾಯ್ಡು ಸಮುದಾಯದಿಂದ ಬಂದಿರುವ ಸುಮಲತಾ ಜನರನ್ನು ಮರಳು ಮಾಡುತ್ತಿದ್ದಾರೆ. ಗೌಡರಾ, ಒಕ್ಕಲಿಗರಾ ಎಂಬುದು ಈಗಲೇ ತೀರ್ಮಾನ ಆಗಲಿ ಎಂದು ಸಂಸದ ಶಿವರಾಮೇಗೌಡ ಸ್ವತಂತ್ರ ಅಭ್ಯರ್ಥಿ ಸುಮಲತಾರ ಜಾತಿ ವಿಚಾರ ಎತ್ತಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ನಾಗಮಂಗಲ ತಾಲೂಕಿನ ಮಲ್ಲೇನಹಳ್ಳಿ ಸಮೀಪ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಗೌಡ್ತಿ ವಿಚಾರ ಪ್ರಸ್ತಾಪಿಸಿದ ಅವರು, ಅಂಬರೀಶ್ರನ್ನ ಮದುವೆ ಆದ ಮೇಲೆ ಸುಮಲತಾ ನಮ್ಮ ಸೊಸೆ. ಆದರೆ ಅವರು ಯಾರನ್ನು ಉಪಚಾರ ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕೆಂಗಲ್ ಹನುಮಂತಯ್ಯ ಪುತ್ರಿ ನಿಂತಿದ್ದರೆ ಬೆಂಬಲ ಕೊಡಬಹುದಿತ್ತು. ಆದ್ರೆ ಸುಮಲತಾಗೆ ಮರುಳಾಗಬೇಡಿ ಎಂದು ಕರೆ ನೀಡಿದರು.
ಅಂಬರೀಶ್ ಕರೆತಂದದ್ದು ನಾನು:
ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು ಅಂತ ಸಚಿವ ಪುಟ್ಟರಾಜು ಹೇಳಿದ್ದರು. ಆದರೆ ಅಂಬಿಯನ್ನು ಕರೆತಂದದ್ದು ನಾನು, ನನ್ನ ಮನೆ ಸಹ ನೀಡಿ ಕರೆತಂದೆ ಎಂದು ಸಂಸದ ಶಿವರಾಮೆಗೌಡರು ಸಚಿವ ಪುಟ್ಟರಾಜುಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ರು.
ಸಂಸದ ಶಿವರಾಮೇಗೌಡರ ಈ ಹೇಳಿಕೆ ಈಗ ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಜಾತಿಯ ಪ್ರಸ್ತಾಪ ಮಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಇದರ ಜೊತೆಗೆ ಅಂಬಿಯನ್ನು ಮಂಡ್ಯಕ್ಕೆ ಕರೆತಂದವರು ಯಾರು ಎಂಬ ಪ್ರಶ್ನೆಯನ್ನು ಸಹ ರಾಜಕೀಯ ವಲಯದಲ್ಲಿ ಹುಟ್ಟುಹಾಕಿದೆ.