ಮಂಡ್ಯ: ಕೊರೊನಾ ಸೋಂಕಿಗೊಳಗಾಗಿ ತಾಯಿ ಸಾವನ್ನಪ್ಪಿದ್ದು, ಮತ್ತೊಂದೆಡೆ ಸೋಂಕಿಗೊಳಗಾದ ತಾಯಿಯ ಬಗ್ಗೆ ಯೋಚಿಸುತ್ತಾ ಊಟ ಬಿಟ್ಟಿದ್ದ ಮಗ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.
ಸುಭಾಷ್ ನಗರದ ನಿವಾಸಿ ಸುಜಾತಾ ಹಾಗೂ ಪುತ್ರ ಸಿ.ಎನ್.ರಮೇಶ್ ಮೃತಪಟ್ಟವರು. ಸುಜಾತಾ ಅವರು ಮೇ 7 ರಂದು ಸೋಂಕಿನ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೀಲಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳ ಹಿಂದೆ ಸುಜಾತಾ ಅವರಿಗೆ ಸೋಂಕು ಉಲ್ಬಣಿಸಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಅವರಿಗೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆ ಸಮಯಕ್ಕೆ ಕೊನೆಯುಸಿರೆಳೆದರು.
ತಾಯಿ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ ಹಿನ್ನೆಲೆಯಲ್ಲಿ ಮಗ ಸಿ.ಎನ್.ರಮೇಶ್ ಕೂಡ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತಾಯಿ ನೆನೆದು ಊಟ ಬಿಟ್ಟಿದ್ದರು. ಅಂತಿಮವಾಗಿ ತಾಯಿ ಸಾವನ್ನಪ್ಪಿದ ಕೆಲವೇ ಹೊತ್ತಿನಲ್ಲಿ ಹೃದಾಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.