ಮಂಡ್ಯ: ಪ್ರಧಾನಿ ಮೋದಿ ಮತ್ತು ಪಾಕಿಸ್ತಾನ ಪಿಎಂ ಇಬ್ಬರೂ ಒಂದೇ ರೀತಿ, ಇವರಿಬ್ಬರದೂ ಡರ್ಟಿ ಪಾಲಿಟಿಕ್ಸ್. ಆದ್ರೆ ನಾವು ಇದನ್ನ ಹೇಳಿದ್ರೆ ದೇಶ ವಿರೋಧಿಗಳು ಅನ್ನೋ ಪಟ್ಟ ಕಟ್ಟುತ್ತಾರೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಆಡಳಿತದ ವಿರುದ್ಧ ಕಿಡಿಕಾರಿದರು.
ಮಂಡ್ಯ ಲೋಕಸಭಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ಅವರು, ತಮ್ಮ ಭಾಷಣದಲ್ಲಿ ಮೊದಲು ಮಂಡ್ಯ ಜನತೆಗೆ ಕನ್ನಡದಲ್ಲಿ ನಮಸ್ಕಾರ ಹೇಳಿದ್ರು. ತೆಲುಗು ಭಾಷಿಕರಿಗೆ ಅಚ್ಚುಮೆಚ್ಚಾಗಿರುವ ದೇವೇಗೌಡರ ಮೊಮ್ಮಗ, ಸಿಎಂ ಕುಮಾರಸ್ವಾಮಿ ಪುತ್ರ ಜಾಗ್ವಾರ್ ನಿಖಿಲ್ ಕುಮಾರಸ್ವಾಮಿ ಪರ ಮತಯಾಚನೆಗೆ ಬಂದಿದ್ದೇನೆ ಎಂದರು.
ಕಳೆದ ಒಂದು ತಿಂಗಳಿಂದ ನಾನು ಅನುಭವಿಸಿದ ಕಷ್ಟ, ನೋವು ಇಲ್ಲಿಗೆ ಬಂದಾಗ ಮಾಯವಾಗಿದೆ. ನಮ್ಮ ತೆಲುಗು ನಾಯಕ ಎನ್‌ಟಿಆರ್‌ಗೆ ಡಾ.ರಾಜ್‌ಕುಮಾರ್ ಅಂದ್ರೆ ಹೆಚ್ಚು ಪ್ರೀತಿ. ಬೆಂಗಳೂರು, ಮೈಸೂರು ಅಂದ್ರೆ ತೆಲುಗರಿಗೆ ಹೆಚ್ಚಿನ ಆಸೆ. ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಿದ ಕೆಆರ್‌ಎಸ್ ಅಣೆಕಟ್ಟು ರೈತರಿಗೆ ವರದಾನವಾಗಿದೆ ಎಂದು ಕನ್ನಡನಾಡು, ಕರ್ನಾಟಕದ ಗಣ್ಯರ ಬಗ್ಗೆ ಹೊಗಳಿದರು.
ಮೋದಿ ಗುಜರಾತ್‌ಗೆ ವಾಪಸ್ ಹೋಗೋದು ಸತ್ಯ:
ನರೇಂದ್ರ ಮೋದಿ ಐಟಿ, ಇಡಿ, ಸಿಬಿಐ ಸೇರಿ ಎಲ್ಲವನ್ನೂ ದುರುಪಯೋಗ ಪಡಿಸಿಕೊಂಡು ಪ್ರತಿಪಕ್ಷಗಳನ್ನ ಹೆದರಿಸುವ ತಂತ್ರ ರೂಪಿಸಿದ್ದಾರೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ. ಇದು ಮೋದಿಗೆ ತಿರುಗುಬಾಣವಾಗಲಿದೆ. ಪ್ರಜಾಪ್ರಭುತ್ವ ತತ್ವದಡಿ ಮೋದಿ ಚುನಾವಣೆ ಎದುರಿಸುತ್ತಿಲ್ಲ. ಈವರೆಗೂ ಮೋದಿ ಒಂದೇ ಒಂದು ಪತ್ರಿಕಾಗೋಷ್ಟಿ ನಡೆಸಿಲ್ಲ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರೋದು ಎಷ್ಟು ಸತ್ಯವೋ, ನರೇಂದ್ರ ಮೋದಿ ಗುಜರಾತ್‌ಗೆ ವಾಪಸ್ ಅಷ್ಟೇ ಸತ್ಯ ಎಂದು ಚಂದ್ರಬಾಬು ನಾಯ್ಡು ಗುಡುಗಿದರು.
ಬಾಲಾಕೋಟ್ ಏರ್ ಸ್ಟ್ರೈಕ್ ಸುಳ್ಳು:
ಬಾಲಾಕೋಟ್ ಏರ್ ಸ್ಟ್ರೈಕ್ ಸುಳ್ಳು, ಪಾಕಿಸ್ತಾನದ ಓರ್ವ ಉಗ್ರನೂ ಸತ್ತಿಲ್ಲ ಎಂದು ಅಲ್ಲಿನ ಸರ್ಕಾರ ಹೇಳುತ್ತೆ. ಇಲ್ಲಿ ನಾವು ಸಹ ಅದನ್ನ ಹೇಳಿದ್ದೇವೆ. ಇಂದು ಪಾಕಿಸ್ತಾನದ ಪಿಎಂ ಇಮ್ರಾನ್ ಖಾನ್ ಅವರು ಮೋದಿ ಮತ್ತೆ ಭಾರತದ ಪ್ರಧಾನಿ ಆಗಲಿ ಎನ್ನುತ್ತಿದ್ದಾರೆ. ಮೋದಿ-ಪಾಕ್ ಪಿಎಂ ಇಬ್ಬರೂ ಒಂದೇ. ಇವರಿಬ್ಬರೂ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ. ನಾವು ಇದನ್ನ ಹೇಳಿದ್ರೆ ದೇಶ ವಿರೋಧಿಗಳು ಕರೆಯಲಾಗುತ್ತೆ ಎಂದರು.
ಇವಿಎಂ ಬಗ್ಗೆ ನಮಗೆ ವಿಶ್ವಾಸವಿಲ್ಲ, ನಾವು ವಿವಿ ಪ್ಯಾಟ್ ವಿರುದ್ಧ ಪ್ರತಿಭಟಿಸುತ್ತಿದ್ದೇವೆ. ಇವಿಎಂ, ವಿವಿ ಪ್ಯಾಟ್ ಸಾಮ್ಯತೆ ಬರ್ತಿಲ್ಲ. ವಿವಿ ಪ್ಯಾಟ್ ಶೇ.50% ಮತ ಎಣಿಕೆ ಮಾಡಬೇಕೆಂದು ನಿನ್ನೆ ಬೇಡಿಕೆ ಇಟ್ಟಿದ್ದೇವೆ ಎಂದು ಇವಿಎಂನಲ್ಲಿರುವ ತಾಂತ್ರಿಕ ದೋಷಗಳ ಕುರಿತು ನಾಯ್ಡು ವಿವರಿಸಿದರು.
ಬಿಜೆಪಿಯನ್ನ ಕಿತ್ತೊಗೆಯಿರಿ:
2019 ರ ಚುನಾವಣೆ ಅತ್ಯಂತ ಮುಖ್ಯವಾದದ್ದು. ಈ ಬಾರಿ ಏನಾದ್ರು ಮೋದಿ ಅಧಿಕಾರಕ್ಕೆ ಬಂದ್ರೆ ಮುಂದೆ ಚುನಾವಣೆಯೇ ಇಲ್ಲದಂತಾಗುತ್ತೆ. ಪ್ರತಿಯೊಬ್ಬರು ಬಿಜೆಪಿ ವಿರುದ್ದ ಮತ ಚಲಾಯಿಸಿ, ಕೋಮುವಾದಿ ಪಕ್ಷವನ್ನು ಕಿತ್ತೊಗೆಯಿರಿ. ನಿಖಿಲ್ನನ್ನು ಹೆಚ್ಚಿನ ಮತದೊಂದಿಗೆ ಗೆಲ್ಲಿಸುವ ಮೂಲಕ ದೇವೇಗೌಡ್ರ ಜೊತೆ ದೆಹಲಿಗೆ ಕಳುಹಿಸಿಕೊಡಿ. ಕರ್ನಾಟಕದಲ್ಲಿ ಕಾಂಗ್ರೆಸ್ -ಜೆಡಿಎಸ್ ಅಭ್ಯರ್ಥಿಗಳನ್ನ ಗೆಲ್ಲಿಸಿ. ಸೀರಿಯಲ್ ನಂಬರ್ ಒಂದು, ಸುಂದರವಾದ ಸಿಂಬಲ್ ತೆನೆಹೊತ್ತ ಮಹಿಳೆಗೆ ಮತಕೊಟ್ಟು ನಿಖಿಲ್ ಗೆಲ್ಲಿಸಿ ನಾಯ್ಡು ಕರೆ ನೀಡಿದರು.