ಮಂಡ್ಯ: ಮನ್ಮುಲ್ ಹಗರಣದಲ್ಲಿ ಜೆಡಿಎಸ್ ಸಂಪೂರ್ಣ ಹೊಣೆ ಹೊರಬೇಕು ಎಂಬ ಚಲುವರಾಯಸ್ವಾಮಿ ಹೇಳಿಕೆ ವಿಚಾರಕ್ಕೆ ರಾತ್ರಿ ಹೊತ್ತು ಬಿಜೆಪಿ, ಬೆಳಗ್ಗೆ ಹೊತ್ತು ಕಾಂಗ್ರೆಸ್ನವರು ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನ್ಮುಲ್ ಹಗರಣದ ಬಗ್ಗೆ ಸಿಬಿಐ ತನಿಖೆ ಮಾಡಿಸಿದರೆ ಯಾರ್ಯಾರು ತಪ್ಪು ಮಾಡಿದ್ದಾರೆ, ಅವರೆಲ್ಲ ಹೊರಗೆ ಬರ್ತಾರೆ. 1 ಸಾವಿರ ಕೋಟಿ ಹಗರಣವಾಗಿದ್ದರೇನು?, ಅಥವಾ 1 ರೂ. ಆಗಿದ್ದರೇನು?. ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಚಲುವರಾಯಸ್ವಾಮಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗು ಅವರ ಮಗನ ಜತೆ ಚೆನ್ನಾಗಿದ್ದಾರೆ. ಅವರನ್ನಿಟ್ಟುಕೊಂಡು ಮನ್ಮುಲ್ ಹಗರಣದ ಬಗ್ಗೆ ತನಿಖೆ ಮಾಡಿಸಿದರೆ ಮುಗಿಯುತ್ತದೆ. ಯಾವುದೇ ರೀತಿಯಲ್ಲಿ ಬೇಕಿದ್ದರೂ ತನಿಖೆ ಮಾಡಿಸಲಿ. ಅವರಿಗೆ ತಾನೇ ಅನುಮಾನ ಶುರುವಾಗಿರುವುದು. ಅವರಿಗೆ ಯಾವ್ಯಾವ ರೀತಿ, ಎಲ್ಲೆಲ್ಲಿ ನೋವಾಗುತ್ತಿದೆಯೋ ನನಗೆ ಗೊತ್ತಿಲ್ಲ. ಬಿಟ್ರೆ ಎಲ್ಲರನು ಕಳ್ಳ ಅಂದ್ಕೋಬಿಡ್ತಾರೆ ಎಂದು ಶಾಸಕ ಸುರೇಶ್ ಗೌಡ ಕಿಡಿಕಾರಿದಾರು.
ನಾವು ಜೀವನದಲ್ಲಿ ಅಂತಹ ಕೆಲಸ ಮಾಡಲು ಹೋಗಲ್ಲ. ಮನ್ಮುಲ್ ರೈತರ ಜೀವನಾಡಿ. ಅಂತಹ ಸಂಸ್ಥೆಯಲ್ಲಿ ಯಾವ ಶಾಸಕರು ಅವ್ಯವಹಾರ ಮಾಡಿಲ್ಲ, ಭಾಗಿಯಾಗಿಲ್ಲ. ಅಷ್ಟೊಂದು ಅನುಮಾನ ಇದ್ದರೆ ಯಾವ ತನಿಖೆಯಾದರೂ ಮಾಡಿಸಲಿ ಎಂದು ಸುರೇಶ್ ಗೌಡ ಸವಾಲು ಹಾಕಿದರು.