ಮಂಡ್ಯ: ಸರ್ಕಾರದಿಂದ ಸಂಬಳವನ್ನು ತೆಗೆದುಕೊಳ್ಳುತ್ತಿದ್ದೀರಿ, ನಿಮಗೆ ಸ್ವಲ್ಪನಾದ್ರೂ ಮಾನ ಮರ್ಯಾದೆ ಇಲ್ವಾ ಎಂದು ಅಧಿಕಾರಿಗಳಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಶ್ರೀರಂಗಪಟ್ಟಣ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಸರ್ವೇ ಇಲಾಖೆ ಸೂಪರ್ ವೈಸರ್ ಸುರೇಶ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇರುವ ದಾಖಲೆಗಳನ್ನು ಕಳೆದುಕೊಂಡಿದ್ದೀರಿ. ಜನರು ದಾಖಲೆ ಕೇಳಿದರೆ ಸುಲಿಗೆ ಮಾಡುತ್ತೀರಾ ಎಂದು ಸರ್ವೇ ಇಲಾಖೆ ಸೂಪರ್‌ವೈಸರ್ ಸುರೇಶ್‌ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿರಿಯ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲ
ಇದೇ ವೇಳೆ ಅವರು, ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರ ಮೇಲೂ ಗರಂ ಆಗಿದ್ದಾರೆ. ಹಿರಿಯ ಅಧಿಕಾರಿಗಳಾಗಿ ನೀವು ಏನು ಮಾಡುತ್ತಿದ್ದೀರಿ? ನಿಮ್ಮ ಸಿಬ್ಬಂದಿಯನ್ನ ದರೋಡೆ ಮಾಡಲು ಜನರ ಮೇಲೆ ಬಿಟ್ಟಿದ್ದೀರಾ? ನೀವು ಕೇಂದ್ರ ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ. ತಾಲೂಕು ಕಚೇರಿಗೆ ಒಮ್ಮೆಯಾದರೂ ಭೇಟಿ ನೀಡಿದ್ದೀರಾ? ನೀವು ಭೇಟಿ ನೀಡಿ ಪರಿಶೀಲನೆ ನಡೆಸಿದ್ರೆ ಹೀಗೆ ಆಗುತ್ತಿತ್ತಾ ಎಂದು ಹಿರಿಯ ಅಧಿಕಾರಿಗಳ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.
ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮಾಡಿರೋದು. ಅದಕ್ಕೆ ಬೀಗ ಹಾಕಿದರೆ ಏನು ಅರ್ಥ ಅಂತಾ ಹಿರಿಯ ಅಧಿಕಾರಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಶೌಚಾಲಯ ಬೀಗ ಓಪನ್ ಮಾಡಿಸುತ್ತೇವೆ ಎಂದರು. ಅದಕ್ಕೆ ಮತ್ತೆ ಗರಂ ಆದ ಶಾಸಕರು, ಓಪನ್ ಮಾಡ್ಸೋದು ಅಲ್ಲ ಸ್ವಚ್ಚವಾಗಿಟ್ಟುಕೊಳ್ಳಿ. ಈ ರೀತಿ ಮತ್ತೆ ಪುನರಾವರ್ತನೆಯಾಗಬಾರದು ಎಂದು ಸೂಚಿಸಿದರು.
ಸೌಜನ್ಯದಿಂದ ವರ್ತಿಸಿ
ತಾಲೂಕು ಕಚೇರಿಯಲ್ಲಿನ ಸರ್ವೇ ಇಲಾಖೆ, ಆಹಾರ ಇಲಾಖೆ, ನೋಂದಣಿ ಕಚೇರಿಗಳ ಎರಡನೇ ಹಂತದ ಅಧಿಕಾರಿಗಳು ಹಾಗೂ ನೌಕರರ ವಿಳಂಬ ಧೋರಣೆಯಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಕಚೇರಿಗೆ ಆಗಮಿಸುವ ಸಾರ್ವಜನಿಕರು ಹಾಗೂ ರೈತರೊಡನೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದ್ರು.
ಸುಖಾಸುಮ್ಮನೆ ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆಸುವ ಬದಲು ನಿಗದಿತ ಸಮಯದಲ್ಲಿ ಕೆಲಸಗಳನ್ನು ಮಾಡಿಕೊಡಬೇಕು. ಈ ಬಗ್ಗೆ ತಕ್ಷಣ ಕ್ರಮ ವಹಿಸಬೇಕೆಂದು ನೂತನ ತಹಶೀಲ್ದಾರ್ ಶ್ವೇತಾ ರವೀಂದ್ರಗೆ ತಾಕೀತು ಮಾಡಿದರು.
ಸರ್ಕಾರದ ನಡೆಗೆ ಖಂಡನೆ:
ಸಿಬ್ಬಂದಿ ಕೊರತೆ ಇರುವ ಸಂದರ್ಭದಲ್ಲಿ ನೋಂದಣಿ ವಿಭಾಗದ ಸಿಬ್ಬಂದಿಯನ್ನು ತರಬೇತಿಗೆ ನಿಯೋಜಿಸುವುದು ಎಷ್ಟು ಸರಿ? ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡದೇ ಕಚೇರಿ ಮುಂದೆ ದಿನವೆಲ್ಲ ಕಾಯಿಸಿ ಕೂರಿಸುವುದು ನ್ಯಾಯವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಖಚಿತ: ಸಿಎಂ ಬೊಮ್ಮಾಯಿ
ಇನ್ನು ಜಿಲ್ಲಾಧಿಕಾರಿಗಳು ಹಳ್ಳಿಯಲ್ಲಿ ವಾಸ್ತವ್ಯ ಮಾಡಿದರೆ ಜನರ ಸಂಕಷ್ಟ ತಿಳಿಯುತ್ತದೆ ಎಂದು ಕೆಲ ಸಚಿವರು ಹೇಳುತ್ತಾರೆ. ಮತ್ತೆ ಕೆಲವರು ನೀವು ಕಚೇರಿಯಲ್ಲಿಯೇ ಕುಳಿತು ಝೂಮ್ ಮೀಟಿಂಗ್ ಮೂಲಕ ಕಾರ್ಯನಿರ್ವಹಿಸಿ ಎನ್ನುತ್ತಾರೆ. ಕೋವಿಡ್ ನೆಪದಲ್ಲಿ ಇತರ ಕೆಲಸ ಕಾರ್ಯಗಳಿಗೆ ಎಳ್ಳುನೀರು ಬಿಡಲಾಗಿದೆ. ಇದು ರಾಜ್ಯ ಸರ್ಕಾರದ ಉತ್ತಮ ನಡೆಯಲ್ಲ ಎಂದು ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ತುರ್ತಾಗಿ ಇಲಾಖಾವಾರು ಸಭೆ ಸೂಚನೆ:
ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ವಿಳಂಬವಾಗುತ್ತಿರುವ ಕೆಲಸ ಕಾರ್ಯಗಳು ಬಗ್ಗೆ ಹಿಂದಿನ ತಹಶೀಲ್ದಾರ್ ಅವರಿಗೂ ಸಾರ್ವಜನಿಕವಾಗಿ ಮನದಟ್ಟು ಮಾಡಲಾಗಿತ್ತು. ತುರ್ತಾಗಿ ಇಲಾಖಾವಾರು ಸಭೆ ನಡೆಸಿ ಅಧಿಕಾರಿಗಳು ಹಾಗೂ ನೌಕರರನ್ನು ಹಿಡಿತದಲ್ಲಿಟ್ಟು ಸಾರ್ವಜನಿಕ ಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
‘ವಿಧಾನ ಸಭೆ ಅಧಿವೇಶನದಲ್ಲಿ ಚರ್ಚಿಸುವೆ’
ಈ ನಿಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗದಿದ್ದರೆ, ವಿಧಾನ ಸಭೆ ಅಧಿವೇಶನದಲ್ಲಿ ಚರ್ಚಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.