ಮಂಡ್ಯ: ಸಂಪುಟ ವಿಸ್ತರಣೆಯಾಗಲಿ ಅಥವಾ ಪುನರ್ ರಚನೆಯಾಗಲಿ ಸದ್ಯಕ್ಕಿಲ್ಲ. ಮಧ್ಯಂತರ ಚುನಾವಣೆಯೂ ಆಗುವುದಿಲ್ಲ. ಈ ಬಗ್ಗೆ ನಮಗೂ ಯಾವುದೇ ಮಾಹಿತಿ ಇಲ್ಲ ಎಂದು ತೋಟಗಾರಿಕಾ ಸಚಿವ ಮುನಿರತ್ನ ಹೇಳಿದರು. ಮಂಡ್ಯ ಜಿಲ್ಲೆಗೆ ಭೇಟಿ ನೀಡುವ ಮಾರ್ಗಮಧ್ಯೆ ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ನವರಿಗೆ ಮಧ್ಯಂತರ ಚುನಾವಣೆ ಬೇಕಾಗಿದೆ. ನಮ್ಮ ಸರ್ಕಾರ ಸುಭದ್ರವಾಗಿದ್ದು, ಯಾವ ಚುನಾವಣೆಯು ನಡೆಯುವುದಿಲ್ಲ. ಸದ್ಯಕ್ಕೆ ಸಂಪುಟ ಬದಲಾವಣೆಯೂ ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಪ್ರವಾಹ ಬಂದಾಗ ಬಿಜೆಪಿ ಸರ್ಕಾರ ಯಾವ ರೀತಿ ಕೆಲಸ ಮಾಡಿ ಪರಿಹಾರ ನೀಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವುದು ಶೋಭೆ ತರುವುದಿಲ್ಲ. ರಾಜಕೀಯ ಲಾಭಕ್ಕಾಗಿ ಈ ಬಗ್ಗೆ ಆರೋಪ ಮಾಡುತ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ: ಯಲಹಂಕದಲ್ಲಿ ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣ: ಸಚಿವ ನಾರಾಯಣ ಗೌಡ