ಮಂಡ್ಯ: ಈಗಾಗಲೇ ಕೊರೊನಾ ರೂಪಾಂತರಿ ವೈರಸ್ ಬಗ್ಗೆ ನಮ್ಮ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಮಂಡ್ಯದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ರೂಪಾಂತರ ಆಗುತ್ತಿರುವುದು ಗೊತ್ತಿರುವ ವಿಷಯ. ಪಕ್ಕದ ಕೇರಳದಿಂದ ಈ ವೈರಸ್ ರಾಜ್ಯದೊಳಗೆ ಪ್ರವೇಶವಾಗುವ ಆತಂಕವಿದೆ. ಕಳೆದೊಂದು ವಾರದಿಂದ ನಮ್ಮ ಸರ್ಕಾರ ಸತತವಾಗಿ ಎಚ್ಚರಿಕೆ ವಹಿಸುತ್ತಿದೆ. ನಿನ್ನೆ ಆರೋಗ್ಯ ಸಚಿವರು ರಾಜ್ಯದ ಎಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಇವತ್ತು ಸಿಎಂ ಸಿದ್ದರಾಮಯ್ಯ ಕೂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಲಿದ್ದಾರೆ. ಜನರೂ ಸಹ ನಿರ್ಲಕ್ಷ್ಯ ಮಾಡದೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಪ್ರಧಾನಿಗಳೊಂದಿಗೆ ಮಾತಾಡಿದ್ದೇವೆ. ಬರ ಪ್ರಮುಖ ವಿಚಾರ. ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಪರಿಹಾರ ನೀಡುವಂತೆ ಕೇಳಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ಕಾರಣ ಅವರಿಂದ ನಮಗೆ ನಿರೀಕ್ಷೆ ಇದೆ. ಬರ ಪರಿಹಾರ ಎಷ್ಟು ಕೊಡುತ್ತಾರೆ ಎಂದು ಕಾದು ನೋಡಬೇಕು. ನಮ್ಮ ಪರಿಸ್ಥಿತಿಯನ್ನು ವಿವರವಾಗಿ ಹೇಳಿದ್ದೇವೆ ಎಂದರು.
ಕೆಆರ್‌ಎಸ್‌ನಿಂದ ಕಾವೇರಿ ನದಿಗೆ ಒಂದು ಕ್ಯೂಸೆಕ್ ನೀರು ಬಿಡುಗಡೆ ವಿಚಾರಕ್ಕೆ, ಪ್ರಾಣಿ, ಪಕ್ಷಿಗಳಿಗೂ ನೀರು ಬೇಕಾಗುತ್ತದೆ. ಅದಕ್ಕೆ ಒಂದು ಸಾವಿರ ಕ್ಯೂಸೆಕ್ ಬಿಡಿ ಎಂದು ಹೇಳಿದ್ದಾರೆ. ಹೀಗಿದ್ದರೂ ನಾವು ನೀರು ಬಿಟ್ಟಿಲ್ಲ. ಸೀಪೇಜ್ ವಾಟರ್ ಹೋಗುತ್ತಿದೆ. ಇನ್ನು ನಾಲೆಗಳಿಗೆ ನೀರು ಬಿಡುವ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಇನ್ನು, ಜೆಡಿಎಸ್‌ಗೆ ಒಳ್ಳೆಯದಾಗಲಿ. ನಮಗೆ ಯಾವುದೇ ದ್ವೇಷ ಇಲ್ಲ. ಅವರು ನಮ್ಮ ಹಳೆಯ ಸ್ನೇಹಿತರು. ಬಿಜೆಪಿಗೆ ಅವಕಾಶ ಕೊಟ್ಟಿದ್ದಾರೆ, ಖುಷಿಪಡುತ್ತೇವೆ. ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಹಿಂದೆ ಜೆಡಿಎಸ್ ಇದ್ದು ಬಂದಿದ್ದು ಗೊತ್ತಿದೆ. ಕಾಂಗ್ರೆಸ್ ಧರ್ಮಸಿಂಗ್ ಜೊತೆಗಿದ್ದು ಬಂದಿದ್ದೂ ಗೊತ್ತಿದೆ. ಇಡೀ ರಾಷ್ಟ್ರದಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮೈತ್ರಿ ಧರ್ಮವನ್ನು ಬಹಳ ಚೆನ್ನಾಗಿ ನಡೆಸೋದು ಜೆಡಿಎಸ್. ಕಾಂಗ್ರೆಸ್‌ನವರು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ. ಜೆಡಿಎಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಮಾತ್ರ ಮೈತ್ರಿ ಧರ್ಮ ಪಾಲಕರು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಪುಟ ಉಪ ಸಮಿತಿ ರಚನೆ: ಸಿಎಂ