ಮಂಡ್ಯ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬೆಟ್ಟಿಂಗ್ ವಿಚಾರದಲ್ಲಿ ಹಣಕ್ಕಾಗಿ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ಚಿಕ್ಕರಸಿನಕೆರೆ ಗ್ರಾಮದ ನಿವಾಸಿ ಪುನೀತ್ (25) ಕೊಲೆಯಾದ ದುರ್ದೈವಿಯಾಗಿದ್ದು, ಈತ ಎಳನೀರು ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಐಪಿಎಲ್ ಬೆಟ್ಟಿಂಗ್ ಹಣ ಪಡೆಯಲೆಂದು ಬುಧವಾರ ಪುನೀತ್ ತನ್ನ ಕೆಲ ಸ್ನೇಹಿತರೊಂದಿಗೆ ಹುಲಿಗೆರೆಪುರ ಗ್ರಾಮಕ್ಕೆ ತೆರಳಿದ್ದ. ಆದರೆ, ಈ ಸಂದರ್ಭದಲ್ಲಿ ಸೌಮ್ಯ ಬಾರ್ ಹಿಂಭಾಗ ಕಾಲುವೆ ಬಳಿ ಬಂದಾಗ ಹಣದ ವಿಚಾರಕ್ಕೆ ತನ್ನ ಬೇರೆ ಸ್ನೇಹಿತರ ಜೊತೆ ಗಲಾಟೆ ನಡೆದಿದೆ. ಆಗ ಪುನೀತ್ ತಲೆಭಾಗಕ್ಕೆ ಆಯುಧದಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ನನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಗುರುವಾರ ಮೃತಪಟ್ಟಿದ್ದಾನೆ. ಇದೀಗ ಈ ಘಟನೆ ಸಂಬಂಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ, ಹಣ ನೀಡುವುದಾಗಿ ಹೇಳಿ ಪುನೀತ್ ತಾವಿದ್ದ ಸ್ಥಳಕ್ಕೆ ಆರೋಪಿಗಳು ಕರೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಐದಾರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.
ಅಂತಾರಾಜ್ಯ ಜಾಲ ಬಯಲಿಗೆ ಎಳೆದಿದ್ದ ಪೊಲೀಸರು: ಪ್ರಸ್ತುತ 16ನೇ ಐಪಿಎಲ್ ಟೂರ್ನಿಯ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಪಂದ್ಯಗಳ ಸೋಲು - ಗೆಲುವು ಮತ್ತು ಆಟಗಾರರ ಪ್ರರ್ದಶನದ ಬಗ್ಗೆ ಎಲ್ಲೆಡೆ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ತೆಲಂಗಾಣದ ರಾಜಧಾನಿ ಹೈದರಾಬಾದ್ನಲ್ಲಿ ಮೂರು ಅಂತಾರಾಜ್ಯ ಕ್ರಿಕೆಟ್ ಬೆಟ್ಟಿಂಗ್ ಜಾಲಗಳನ್ನು ಪೊಲೀಸರು ಬೇಧಿಸಿದ್ದರು.
ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತಾಲಯದ ಪೊಲೀಸರು ಏಕಕಾಲಕ್ಕೆ ಕಾರ್ಯಾಚರಣೆ ಕೈಗೊಂಡು ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಮೂರು ಗ್ಯಾಂಗ್‌ಗಳ ಏಳು ಜನರನ್ನು ಬಂಧಿಸಿದ್ದರು. ಅಲ್ಲದೇ, ಬಂಧಿತ ಆರೋಪಿಗಳಿಂದ 36 ಫೋನ್‌ಗಳು, ಮೂರು ಲ್ಯಾಪ್‌ಟಾಪ್‌ಗಳು, ಒಂದು ಟ್ಯಾಬ್ ಹಾಗೂ ರೂಟರ್ ಜೊತೆಗೆ ನಗದು ಮತ್ತು ಬ್ಯಾಂಕ್ ಖಾತೆಗಳಲ್ಲಿನ 1.84 ಕೋಟಿ ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.
ಇದೇ ವೇಳೆ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಈ ದಂಧೆ ನಡೆಸುತ್ತಿದ್ದ ಆರೋಪಿಗಳು ಸಬ್ ಬುಕ್ಕಿಗಳಿಗೆ ಆ್ಯಪ್ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ನೀಡುತ್ತಿದ್ದರು. ಫೋನ್ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ನಗದು ವಹಿವಾಟುಗಳನ್ನು ಮಾಡಲಾಗಿತ್ತು. ಹೀಗೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ತಮ್ಮ ಜಾಲವನ್ನು ಹೊಂದಿದ್ದರು ಎಂಬ ಮಾಹಿತಿಯನ್ನೂ ಪೊಲೀಸರು ಬಯಲಿಗೆ ಎಳೆದಿದ್ದರು. ಸೈಬರಾಬಾದ್ ಪೊಲೀಸ್ ಕಮಿಷನರ್ ಸ್ಟೀಫನ್ ರವೀಂದ್ರ ಮಾರ್ಗದರ್ಶನದಲ್ಲಿ ಶಂಶಾಬಾದ್ ಮತ್ತು ರಾಜೇಂದ್ರನಗರ ಡಿಸಿಪಿಗಳಾದ ನಾರಾಯಣ ರೆಡ್ಡಿ, ಜಗದೀಶ್ವರರೆಡ್ಡಿ, ಎಸ್‌ಒಟಿ ಡಿಸಿಪಿ ರಶೀದ್, ಹೆಚ್ಚುವರಿ ಡಿಸಿಪಿಗಳಾದ ನಾರಾಯಣ, ಶೋಭನ್ ನೇತೃತ್ವದ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
ಇದನ್ನೂ ಓದಿ: ಐಪಿಎಲ್ ಆನ್‌ಲೈನ್ ಬೆಟ್ಟಿಂಗ್: ಅಂತಾರಾಜ್ಯ ಜಾಲಗಳು ಪತ್ತೆ, 1.84 ಕೋಟಿ ಜಪ್ತಿ