ಮಂಡ್ಯ: ಕೋವಿಡ್ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿ ಜಿಲ್ಲೆ ಇಡೀ ವಿಶ್ವದ ಗಮನ ಸೆಳೆದಿತ್ತು. ಮಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆಗೆ ಕೈ ಹಾಕಿ ಯಶಸ್ವಿಯೂ ಆಗಿ ಇತರ ವೈದ್ಯಕೀಯ ತಂಡಕ್ಕೆ ಮಾದರಿಯೂ ಆಗಿದ್ದರು. ಹೀಗೆ ಗಮನ ಸೆಳೆದ ಮಿಮ್ಸ್‌ನಲ್ಲಿ ಇದುವರೆಗೆ ಎಷ್ಟು ಸೋಂಕಿತರಿಗೆ ಹೆರಿಗೆ ಮಾಡಿಸಲಾಗಿದೆ, ನವಜಾತ ಶಿಶುಗಳ ಆರೋಗ್ಯ ಹೇಗಿದೆ ಎಂಬುದರ ವರದಿ ಇಲ್ಲಿದೆ.
ಕೋವಿಡ್ ಬಂದ ಸಂದರ್ಭದಲ್ಲಿ ಭಯವೋ ಭಯ. ಕೊರೊನಾ ಬಂದರೆ ಸಾವೇ ಗತಿ ಎಂಬ ಆತಂಕ ಇತ್ತು. ಅದರಲ್ಲೂ ಗರ್ಭಿಣಿಯರಿಗೆ ಆತಂಕ ಹೆಚ್ಚಾಗಿಯೇ ಇತ್ತು. ಆದರೆ ಮಿಮ್ಸ್ ವೈದ್ಯರು ಮಾಡಿದ ಯಶಸ್ವಿ ಶಸ್ತ್ರಚಿಕಿತ್ಸೆ ಗರ್ಭಿಣಿಯರಿಗೆ ಆತ್ಮಸ್ಥೈರ್ಯ ತುಂಬಿದೆ. ಹೀಗಾಗಿ ಇಲ್ಲಿವರೆಗೂ 55 ಮಂದಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಮಿಮ್ಸ್‌ನಲ್ಲಿ ಹೆರಿಗೆ ಮಾಡಿಸಲಾಗಿದೆ. ಸೋಂಕಿತ ಗರ್ಭಿಣಿಯರಲ್ಲಿ 25ಕ್ಕೂ ಹೆಚ್ಚು ಮಂದಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿರೋದು ಮತ್ತೊಂದು ಸಾಧನೆಯಾಗಿದೆ. ಇನ್ನು ಹೆರಿಗೆ ನಂತರ ನವಜಾತ ಶಿಶುವಿನ ಕೋವಿಡ್ ಪರೀಕ್ಷೆ ಮಾಡುತ್ತಿದ್ದು, ಸದ್ಯ ಎರಡು ನವಜಾತ ಶಿಶುಗಳಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು. ಆ ಶಿಶುಗಳು ಗುಣಮುಖವಾಗಿ ತಾಯಿಯ ಮಡಿಲು ಸೇರಿವೆ.
ಕೊರೊನಾ ಸೋಂಕಿತ ಬಾಣಂತಿಯರಿಂದಲೇ ಹಾಲುಣಿಸುವ ಪ್ರಯೋಗವೂ ಯಶಸ್ವಿಯಾಗಿದೆ. ಹೊಸ ಹೊಸ ಪ್ರಯೋಗಗಳ ಮೂಲಕ ಮಿಮ್ಸ್ ವೈದ್ಯರು ಕೊರೊನಾ ಸೋಂಕಿತ ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಆರೋಗ್ಯ ಕಾಪಾಡುತ್ತಿದ್ದಾರೆ. ಇತರೆ ಆರೋಗ್ಯ ಸಮಸ್ಯೆಯಿಂದ ಓರ್ವ ಗರ್ಭಿಣಿ ಮಾತ್ರ ಸಾವಿಗೀಡಾಗಿದ್ದು ನೋವಿನ ಸಂಗತಿಯಾಗಿದೆ.