ಮಂಡ್ಯ: ನಾಳೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಬೈಕ್ ತೆಗೆದುಕೊಂಡು ಬಂದರೆ ಸೀಜ್ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತು ಖರೀದಿಗೆ ನಡೆದುಕೊಂಡು ಹೋಗಬೇಕು. ಬೈಕ್ ತೆಗೆದುಕೊಂಡು ರಸ್ತೆ ಮೇಲೆ ಬಂದ್ರೆ ಸೀಜ್ ಮಾಡಲಾಗುವುದು. ಅಲ್ಲದೇ ನಾಳೆಯಿಂದ ಸೀಜ್ ಮಾಡಿದ ಗಾಡಿಗಳನ್ನ ಕೋರ್ಟ್ನಲ್ಲಿಯೇ ಬಿಡಿಸಿಕೊಳ್ಳಬೇಕಾಗುತ್ತದೆ ಎಂದು ಬೈಕ್ ಸವಾರರಿಗೆ ಎಚ್ಚರಿಕೆ ರವಾನಿಸಿದ್ದಾರೆ.
ಕರ್ಫ್ಯೂ ಘೋಷಣೆ ಬಳಿಕ ಮಾಸ್ಕ್ ಧರಿಸದಿದ್ದಕ್ಕೆ 16,776 ಕೇಸ್ಗಳನ್ನು ದಾಖಲಿಸಲಾಗಿದೆ. ಇಲ್ಲಿಯವರೆಗೆ 717 ಬೈಕ್ಗಳನ್ನ ಸೀಜ್ ಮಾಡಲಾಗಿದೆ. ನಾಳೆ ಜಿಲ್ಲೆಯಲ್ಲಿ 11 ಚೆಕ್ ಪೋಸ್ಟ್ಗಳನ್ನ ತೆರೆಯಲಾಗಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ನಿಗಾವಹಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದರು.
ಕೊರೊನಾ ಎರಡನೇ ಅಲೆಗೆ 84 ಜನ ಪೊಲೀಸರಿಗೆ ಪಾಸಿಟಿವ್ ಬಂದಿದೆ. ಈ ಪೈಕಿ 22 ಜನರು ಚೇತರಿಸಿಕೊಂಡಿದ್ದು, 62 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.