ಮಂಡ್ಯ: ವೈಯಕ್ತಿಕ ದ್ವೇಷಕ್ಕೆ ಅಡಿಕೆ ಗಿಡ ಹಾಗೂ ತೆಂಗಿನ ಗಿಡಗಳನ್ನು ಕಿತ್ತು ನಾಶಪಡಿಸಿರುವ ಘಟನೆ ಸಂತೇಬಾಚಹಳ್ಳಿ ಹೋಬಳಿಯ ರಾಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಚಂದ್ರಪ್ಪ ಮತ್ತು ಪಕ್ಕದ ಜಮೀನಿನ ರೈತ ಕುಮಾರ, ಶಿವಣ್ಣ, ಸುರೇಶ, ಶಾಂತಕುಮಾರ್ ಜಮೀನಿನಲ್ಲಿ ಸುಮಾರು 100ಕ್ಕೂ ಅಧಿಕ ಅಡಿಕೆ ಹಾಗೂ 150ಕ್ಕೂ ಹೆಚ್ಚು ತೆಂಗಿನ ಗಿಡಗಳನ್ನ ಕಿತ್ತು ಹಾಕಿದ್ದಾರೆ.
ರಾಮನಕೊಪ್ಪಲು ಗ್ರಾಮದ ಸರ್ವೆ ನಂ. 14ರ ರೈತ ಚಂದ್ರಪ್ಪನ ಜಮೀನಿನಲ್ಲಿ ತೆಂಗಿನ ಸಸಿಗಳನ್ನು ಮತ್ತು ಅಡಿಕೆ ಗಿಡಗಳನ್ನು ನಾಶಪಡಿಸಿದ್ದು, ಪಕ್ಕದ ಸರ್ವೆ ನಂ.18ಕ್ಕೆ ಸೇರಿದ ಜಮೀನಿನ ತುಂತುರು ನೀರಾವರಿಯ ಪೈಪ್, ಮೋಟಾರು ಕೇಬಲ್‌ಗಳನ್ನು ಕದ್ದೊಯ್ದಿದ್ದಾರೆ. ಜತೆಗೆ ಕೆಲವನ್ನು ನಾಶಪಡಿಸಿದ್ದಾರೆ.
ಶಿವಣ್ಣ, ಸುರೇಶ, ಕುಮಾರ ಎಂಬ ರೈತರ ಜಮೀನಿನಲ್ಲಿ ಮೋಟಾರ್ ಬೋರ್ಡ್, ಕೇಬಲ್ ವೈರ್‌ಗಳ ಜೊತೆಗೆ ತೆಂಗಿನ ಸಸಿ, ಅಡಿಕೆ ಗಿಡಗಳನ್ನು ನಾಶಪಡಿಸಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಮಾಡಿ ಸೂಕ್ತ ನ್ಯಾಯ ದೊರಕಿಸಿಕೊಡಿ ಎಂದು ರಾಮನ ಕೊಪ್ಪಲು ಗ್ರಾಮದ ಚಂದ್ರಪ್ಪ ಅವರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆದರೆ ರಾಜಕೀಯ ಒತ್ತಡ ಇರುವುದರಿಂದ ಪೊಲೀಸರು ಆರೋಪಿಗಳ ಬಗ್ಗೆ ಕ್ರಮ ವಹಿಸುತ್ತಿಲ್ಲ ಎನ್ನಲಾಗಿದೆ. ಪ್ರಭಾವಿ ವ್ಯಕ್ತಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡು ರೈತನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.