ಮಂಡ್ಯ : ನಗರದ ಅಂಬೇಡ್ಕರ್ ಭವನದಲ್ಲಿ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ನೇತೃತ್ವದಲ್ಲಿ ಪೊಲೀಸ್-ಜನ ಸಂಪರ್ಕ ಸಭೆ ನಡೆಯಿತು. ಸಭೆಯಲ್ಲಿ ಬೃಹತ್ ಗೋಲ್ಡ್ ದೋಖಾ ಪ್ರಕರಣ ಮಾರ್ದನಿಸಿತು.
ಜಿಲ್ಲೆಯಲ್ಲಿ ಬೃಹತ್ ಗೋಲ್ಡ್ ದೋಖಾ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಮಂದಿ ದೂರು ನೀಡಿದ್ದಾರೆ. ಆದರೆ, ಪ್ರಕರಣ ಬೇಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬದಲಿಗೆ ಠಾಣೆಗೆ ಹೋದಾಗ ದೂರುದಾರರನ್ನೇ ಹೆದರಿಸಿ, ಬೆದರಿಸಿ ಆರೋಪಿಗಳಂತೆ ನಡೆಸಿಕೊಳ್ಳುತ್ತಾರೆ ಎಂದು ದೂರುದಾರರಾದ ಶೀಲಾ ಎಂಬುವರು ಆರೋಪಿಸಿದರು.
ಗೋಲ್ಡ್ ಪ್ರಕರಣದಲ್ಲಿ ಹಲವಾರು ಮಂದಿಗೆ ವಂಚನೆಯಾಗಿದೆ. ಆದರೆ, ಈವರೆಗೂ ದಾಖಲಾಗಿರುವುದು ಕೇವಲ 4 ಎಫ್‌ಐಆರ್ ಮಾತ್ರ. ಉಳಿದ ಎಲ್ಲಾ ಪ್ರಕರಣಗಳನ್ನೂ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಸೂಚಿಸಿ ಎಂದು ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಐಜಿಪಿ ವಿಪುಲ್ ಕುಮಾರ್, ಸಭೆ ಬಳಿಕ ಪ್ರತ್ಯೇಕವಾಗಿ ಭೇಟಿಯಾಗಿ ಮಾಹಿತಿ ಪಡೆಯುತ್ತೇವೆ. ಇಲಾಖೆಯ ಆಂತರಿಕ ವಿಚಾರ ಬಹಿರಂಗ ಆಗೋದು ಬೇಡ ಎಂದು ದೂರುದಾರರಿಗೆ ಭರವಸೆ ನೀಡಿದರು.
ಕೆಎಂ ದೊಡ್ಡಿ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಇದೆ ಹಾಗೂ ಎತ್ತಿನಗಾಡಿಯಲ್ಲಿ ಹೆಚ್ಚಿನ ಕಬ್ಬಿನ ಲೋಡ್ ತುಂಬುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿ ಅಪಘಾತ ಹೆಚ್ಚಳವಾಗಿವೆ. ಎಲ್ಲಾ ಠಾಣೆಯಲ್ಲೂ ಕೊಟ್ಟ ದೂರನ್ನು ಕೂಲಂಕಷವಾಗಿ ಪರಿಗಣಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಇದೇ ವೇಳೆ ಮುತ್ತತ್ತಿಯಲ್ಲಿ ಅವ್ಯಾಹತವಾಗಿ ಮದ್ಯ ಮಾರಾಟ ಹಾಗೂ ಅಕ್ರಮವಾಗಿ ಜೂಜಾಟ ನಡೆಯುತ್ತಿದೆ ಎಂದು ಐಜಿಪಿ ಅವರ ಗಮನಕ್ಕೆ ತಂದರು. ಪ್ರಚಾರದ ಕೊರತೆಯಿಂದಾಗಿ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಹೆಚ್ಚು ಸಾರ್ವಜನಿಕರು ಸೇರಿರಲಿಲ್ಲ. ಇದನ್ನು ಗಮನಿಸಿದ ಐಜಿಪಿ ಮುಂದಿನ ದಿನಗಳಲ್ಲಿ ಸಭೆ ಬಗ್ಗೆ ಪ್ರಚಾರ ಮಾಡಿ ಹೆಚ್ಚು ಚರ್ಚೆಯಲ್ಲಿ ಹೆಚ್ಚು ಮಂದಿ ಭಾಗವಹಿಸುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.