ಮಂಡ್ಯ: ಸುಮಾರು 750ಕ್ಕೂ ಹೆಚ್ಚು ಸಹಕಾರ ಸಂಘಗಳಿಗೆ ಮತದಾನ ಹಕ್ಕು ನೀಡದ್ದನ್ನು ಖಂಡಿಸಿ ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಮನ್ಮುಲ್ ವಿರುದ್ಧ ಪ್ರತಿಭಟನೆ ನಡೆಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿಯ ಮನ್ಮುಲ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿ ಕೂಡಲೇ ಮತದಾನದ ಹಕ್ಕು ನೀಡುವಂತೆ ಒತ್ತಾಯಿಸಿದರು.
ಮನ್ಮುಲ್ನಲ್ಲಿ ಅಧಿಕಾರ ಹಿಡಿಯಲು ಹಿಂದಿನ ಆಡಳಿತ ಮಂಡಳಿ ವಾಮಮಾರ್ಗ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ1,250 ಸಹಕಾರ ಸಂಘಗಳಿದ್ದು, ಕೇವಲ 500 ಸಂಘಗಳಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಕೂಡಲೇ ಮಧ್ಯೆ ಪ್ರವೇಶಿಸಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.