ಮಂಡ್ಯ: ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ಹೋರಾಟಕ್ಕೆ ಮಂಡ್ಯ ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ 10 ಅನಧಿಕೃತ ಕ್ರಷರ್ಗಳ ವಿರುದ್ಧ ಪಿಸಿಆರ್(ಖಾಸಗಿ ಪ್ರಕರಣ) ದಾಖಲಿಸಲಾಗಿದೆ. ಜಿಲ್ಲೆಯ ಹಿರಿಯ ಭೂ ವಿಜ್ಞಾನಿ ಪದ್ಮಜ 6 ಹಳ್ಳಿಗಳ ವ್ಯಾಪ್ತಿಯ 10 ಅನಧಿಕೃತ ಕ್ರಷರ್ಗಳ ಮೇಲೆ ಶ್ರೀರಂಗಪಟ್ಟಣ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ, ಆಲಗೂಡು, ಗಣಂಗೂರು, ಹಂಗರಹಳ್ಳಿ, ಗೌಡಹಳ್ಳಿ, ನೀಲನಕೊಪ್ಪಲು ವ್ಯಾಪ್ತಿಯಲ್ಲಿ ಲೈಸನ್ಸ್ ಪಡೆಯದೆ ಅನಧಿಕೃತವಾಗಿ ನಡೆಯುತ್ತಿದ್ದ ಕ್ರಷರ್ಗಳ ಮೇಲೆ ಜಂಟಿ ತಂಡ ರಚನೆ ಮಾಡಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅಷ್ಟೇ ಅಲ್ಲದೆ, ಅನಧಿಕೃತ ಗಣಿಗಾರಿಕೆಗಳ ವರದಿ ನೀಡುವಂತೆ ಸೂಚಿಸಿದ್ದಾರೆ. ಗಣಿಗಾರಿಕೆ ಹೊಂಡಗಳಲ್ಲಿ ಹೊರತೆಗೆದಿರುವ ಕಲ್ಲಿನ ಪ್ರಮಾಣ ಅಂದಾಜಿಸಿ, ನಕ್ಷೆಯೊಂದಿಗೆ ವರದಿ ನೀಡಲು ಆದೇಶ ನೀಡಿದ್ದಾರೆ.