ಮಂಡ್ಯ: ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿದೆ. ಒಂಟಿ ಮಹಿಳೆಯ ಮೃತದೇಹವು ಸಜೀವ ದಹನವಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿಯಲ್ಲಿ ಸೋಮವಾರ ತಡರಾತ್ರಿ ಘಟನೆ ನಡೆದಿದೆ. ಮಾರಸಿಂಗನಹಳ್ಳಿ ಗ್ರಾಮದ ಪ್ರೇಮ(42) ಮೃತ ಮಹಿಳೆಯಾಗಿದ್ದು, ದುಷ್ಕರ್ಮಿಗಳು ಮನೆಯಲ್ಲಿಯೇ ಬೆಂಕಿ ಹಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಪ್ರೇಮಾರ ಗಂಡ ಶಿವಕುಮಾರ್ ಆರಾಧ್ಯ, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆಯೇ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಮಹಿಳೆಗೆ ಶ್ರೀಶೈಲ ಆರಾಧ್ಯ ಎಂಬ ಮಗನಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದು, ಕುಟುಂಬ ಸಮೇತ ನೆಲೆಸಿದ್ದರು. ಹೀಗಾಗಿ ಪ್ರೇಮಾ ಒಬ್ಬರೇ ಮನೆಯಲ್ಲಿದ್ದರು. ಗ್ರಾಮದಲ್ಲಿ ಸ್ವಲ್ಪ ತೋಟವಿದ್ದು, ಅದನ್ನು ನೋಡಿಕೊಂಡಿದ್ದರು.
ಸಾವು ಕೊಲೆಯೋ? ಆಕಸ್ಮಿಕ ದುರಂತವೋ?: ಮಾರಸಿಂಗನಹಳ್ಳಿ ಗ್ರಾಮದಲ್ಲಿನ ತನ್ನ ಮನೆಯಲ್ಲಿ ಮಹಿಳೆಯು ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದಳು. ಗಂಡನನ್ನು ಕಳೆದುಕೊಂಡ ಬಳಿಕ ಜೀವನೋಪಾಯಕ್ಕಾಗಿ ಒಂದಷ್ಟು ದಿನಗಳ ಕಾಲ ಮದ್ದೂರು ಬಳಿ ಇರುವ ಗಾರ್ಮೆಂಟ್ಸ್ಗೆ ಕೆಲಸಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ಮೂರು ತಿಂಗಳ ಹಿಂದೆಯಷ್ಟೇ ಕೆಲಸಕ್ಕೆ ಹೋಗುವುದನ್ನು ಬಿಟ್ಟಿದ್ದರು. ಸೋಮವಾರ ಮನೆಯಲ್ಲೇ ಮಲಗಿದ್ದ ಪ್ರೇಮಾ ಬೆಳಗಾಗುವುದರೊಳಗೆ ಸಜೀವ ದಹನಗೊಂಡಿದ್ದಾರೆ. ಮಹಿಳೆಯ ಸಾವು ಕೊಲೆಯೋ? ಆಕಸ್ಮಿಕ ದುರಂತವೋ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯು ಭಾನುವಾರ ತಮ್ಮ ಸಂಬಂಧಿಕರ ಜೊತೆಗೆ ಫೋನ್ನಲ್ಲಿ ಮಾತನಾಡಿ, ಯೋಗಕ್ಷೇಮ ವಿಚಾರಿಸಿದ್ದರು. ಸೋಮವಾರವೂ ಆರಾಮಾಗಿಯೇ ಇದ್ದವಳು ಬೆಳಗಾಗುವುದರೊಳಗೆ ಮನೆಯಲ್ಲೇ ಸುಟ್ಟು ಕರಕಲಾಗಿದ್ದಾರೆ. ಬೆಳಗ್ಗೆ ಮಹಿಳೆ ಮಲಗಿದ್ದ ರೂಮಿನಿಂದ ದಟ್ಟ ಹೊಗೆ ಕಂಡುಬಂದಿದೆ. ಇದನ್ನು ಗಮನಿಸಿದ ಜನರು ಸ್ಥಳಕ್ಕೆ ಹೋಗಿ ನೋಡಿದಾಗ ಮಹಿಳೆ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.
ಪ್ರೇಮಾ ಮಲಗಿದ್ದ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವುದರಿಂದ ಬೆಂಕಿ ಹೊತ್ತಿಕೊಂಡು ಆಕೆಯ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂಬ ಅನುಮಾನ ಮೂಡಿದೆ. ಆಕೆಯ ತಲೆಯ ಭಾಗ ಮಾತ್ರ ಸ್ವಲ್ಪ ಇದೆ. ಆದರೆ ಈ ಕೋಣೆ ಸುಟ್ಟು ಭಸ್ಮವಾಗಿದ್ದನ್ನು ಹೊರತುಪಡಿಸಿ, ಮನೆಯ ಇತರ ಭಾಗ ಚೆನ್ನಾಗಿಯೇ ಇದೆ. ಜೊತೆಗೆ ಮನೆಯಲ್ಲಿ 100 ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಜೊತೆಗೆ ಒಂದು ಲ್ಯಾಪ್ ಟಾಪ್ ಕೂಡ ಕಾಣಿಸುತ್ತಿಲ್ಲ ಎನ್ನಲಾಗಿದೆ. ಇನ್ನು ಮನೆಯಲ್ಲಿ ಈ ಹಿಂದೆಯೂ ಶಾರ್ಟ್ ಸರ್ಕ್ಯೂಟ್ ಆಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ. ಹೀಗಾಗಿ ಮಹಿಳೆಯು ಬೆಂಕಿಯಿಂದ ಮೃತಪಟ್ಟಿದ್ದಾಳಾ? ಅಥವಾ ಕೊಲೆ ಮಾಡಲಾಗಿದೆಯಾ? ಎಂಬುದು ಪೊಲೀಸ್ ತನಿಖೆಯಿಂದಲೇ ಗೊತ್ತಾಗಬೇಕಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಯತೀಶ್, 'ಮಾರಸಿಂಗನಹಳ್ಳಿ ಗ್ರಾಮದಲ್ಲಿ 42 ವರ್ಷ ಪ್ರಾಯದ ಮಹಿಳೆಯ ಶವವು ಆಕೆಯ ಮನೆಯಲ್ಲೇ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎಫ್ಎಸ್ಎಲ್ ತಂಡದಿಂದ ಪರಿಶೀಲನೆ ನಡೆಸಿ, ಸ್ಥಳದಿಂದ ತನಿಖೆಗೆ ಅಗತ್ಯ ಮಾದರಿಗಳನ್ನು ಪಡೆಯಲಾಗುತ್ತಿದೆ. ವೈದ್ಯರು ಶವದ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಸದ್ಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕೊಲೆಯೋ ಅಥವಾ ಶಾರ್ಟ್ ಸರ್ಕ್ಯೂಟ್ನಿಂದ ಸಾವು ಆಗಿದೆಯೋ ಎಂಬುದು ತಿಳಿದಿಲ್ಲ. ಮಹಿಳೆಯ ಮಗನ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು' ಎಂದರು.
'ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಮಗನನ್ನು ಸಂಪರ್ಕಿಸಲಾಗಿದೆ. ಆತ ಒಂದು ಲ್ಯಾಪ್ಟಾಪ್ ಹಾಗೂ 80ರಿಂದ 100 ಗ್ರಾಂನಷ್ಟು ಚಿನ್ನ-ಬೆಳ್ಳಿ ಆಭರಣ ಕಾಣೆಯಾಗಿದೆ ಎಂದಿದ್ದಾನೆ. ಕೇವಲ ರೂಮಿನಲ್ಲಿ ಮಾತ್ರ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ' ಎಂದು ಎಸ್ಪಿ ಯತೀಶ್ ಮಾಹಿತಿ ನೀಡಿದ್ದಾರೆ. ಪ್ರೇಮಾರ ಸಾವು ಮಾರಸಿಂಗನಹಳ್ಳಿಯ ಜನತೆಯಲ್ಲಿ ಭಯ ಮೂಡಿಸಿದೆ. ಸದ್ಯ ಬೆಸಗರ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ.. ತಾಯಿ ಮಗ ಸಾವು, ಅಪ್ಪ ಮಗಳ ಸ್ಥಿತಿ ಗಂಭೀರ