ಮಂಡ್ಯ: ಜಿಲ್ಲೆಯಲ್ಲಿಯೂ ಕೋವಿಡ್ ಸೋಂಕಿತರ ಸಂಖ್ಯೆ ದಿನೆ ದಿನೇ ಏರುತ್ತಿದ್ದು, ಕೊರೊನಾ ಸೋಂಕಿತರಿಗೆ ಹಾಸಿಗೆಗಳಿಲ್ಲದೇ ಹಾಹಾಕಾರ ಎದುರಾಗಿದೆ. ಹಾಗಾಗಿ ನಿತ್ಯ ನೂರಾರು ಮಂದಿ ಆಸ್ಪತ್ರೆ ಆವರಣಕ್ಕೆ ಬಂದು ಹಾಸಿಗೆ ಕೊಡುವಂತೆ ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದ ಎಲ್ಲಾ 400 ಹಾಸಿಗೆಗಳು ಭರ್ತಿಯಾಗಿದ್ದು, ಆ ವಿವರವನ್ನು ಬೋರ್ಡ್‌ನಲ್ಲಿ ಬರೆಯಲಾಗಿದೆ. ಆದರೂ ನಿತ್ಯ ನೂರಾರು ಸೋಂಕಿತರು ಆಸ್ಪತ್ರೆಗೆ ಬಂದು ಹಾಸಿಗೆ ಕೊಡುವಂತೆ ಬೇಡುತ್ತಿದ್ದಾರೆ.
ಇನ್ನ ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಕೋವಿಡ್ ದೃಢಪಡುತ್ತಿದ್ದು, ಬಹುತೇಕ ಮಂದಿಗೆ ಆಮ್ಲಜನಕದ ಅವಶ್ಯಕತೆ ಕಂಡು ಬರುತ್ತಿದೆ. ಹಾಗಾಗಿ ಜಿಲ್ಲಾಸ್ಪತ್ರೆ ವೈದ್ಯರು ಬೇರೆ ಬೇರೆ ತಾಲೂಕು ಆಸ್ಪತ್ರೆಗಳಿಗೆ ರೋಗಿಗಳನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಆದರೆ ತಾಲೂಕು ಆಸ್ಪತ್ರೆಗಳಲ್ಲೂ ಇದೇ ಸ್ಥಿತಿ ಇದ್ದು ಮುಂದೆ ರೋಗಿಗಳನ್ನು ಕಳುಹಿಸುವುದು ಎಲ್ಲಿಗೆ ಎಂಬ ಪ್ರಶ್ನೆ ಸೃಷ್ಟಿಯಾಗಿದೆ.
ಈಗಾಗಲೇ 6 ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಆ ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯಾಗದ ಕಾರಣ ಆ ಪ್ರಕ್ರಿಯೆಗೆ ತಡೆ ಬಿದ್ದಿದೆ. ಇತ್ತ ಸಮುದಾಯ ಆರೋಗ್ಯ ಕೇಂದ್ರಗಳನ್ನು ಬಳಸಿಕೊಳ್ಳೋಣವೆಂದರೆ ಅಲ್ಲಿಗೂ ಆಮ್ಲಜನಕ ಪೂರೈಕೆ ಇಲ್ಲ ಎನ್ನತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ.
ಮಿಮ್ಸ್‌ನಲ್ಲಿ ಹೆಚ್ಚುವರಿಯಾಗಿ 150 ಹಾಸಿಗೆ ಸೌಲಭ್ಯದ ವಾರ್ಡ್ ಸಿದ್ಧಗೊಂಡರೂ ಸಹ ಆಮ್ಲಜನಕ ಸಮಸ್ಯೆಯಿಂದ ಸೊಂಕಿತರಿಗೆ ಹಾಸಿಗೆ ನೀಡುತ್ತಿಲ್ಲ. ಆದ್ರೆ ಜಿಲ್ಲಾಸ್ಪತ್ರೆಗೆ ಇನ್ನೊಂದು ದ್ರವರೂಪದ ಆಮ್ಲಜನಕ ಘಟಕ ಬೇಕು. ಅದು ಸಾಧ್ಯವಾದರೆ ಮಾತ್ರ ಹೆಚ್ಚುವರಿ ವಾರ್ಡ್‌ಗೆ ರೋಗಿಗಳನ್ನು ದಾಖಲು ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್.
ಒಟ್ಟಾರೆ, ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಹಾಹಾಕಾರ ಉಂಟಾದರೂ ಸಹ ಜಿಲ್ಲಾ ಉಸ್ತುವಾರಿ ಆಗಲಿ ಜಿಲ್ಲಾಡಳಿತವಾಗಲಿ ತಲೆಕೆಡಿಸಿಕೊಳ್ಳದಿರುವುದು ದುರಂತವಾಗಿದೆ.