ಮಂಡ್ಯ: ಜಿಲ್ಲಾ ಕಾಂಗ್ರೆಸ್ ಖಜಾಂಚಿ, ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಮೇಲಿನ ನಾಲಾ ಒತ್ತುವರಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇಂದು ನೀರಾವರಿ ಮತ್ತು ಕಂದಾಯ ಸರ್ವೆ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ್ದಾರೆ.
ಉಮ್ಮಡಹಳ್ಳಿ ಸರ್ವೆ ನಂಬರ್ 129, 130ರ ಮದ್ದೂರು ವಿತರಣಾ ನಾಲಾ ಜಾಗವನ್ನು ಒತ್ತುವರಿ ಮಾಡಿದ ಬಗ್ಗೆ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರವೀಂದ್ರ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆ ಜಂಟಿ ಸರ್ವೆ ನಡೆಸುತ್ತಿದೆ.
ಬೆಳಿಗ್ಗೆಯಿಂದಲೇ ನಾಲಾ ಜಾಗ ಸರ್ವೆ ನಡೆಸುತ್ತಿದ್ದು, ಪೊಲೀಸ್ ರಕ್ಷಣೆಯಲ್ಲಿ ಅಧಿಕಾರಿಗಳು ಬೀಡುಬಿಟ್ಟು ನಾಲಾ ಜಾಗವನ್ನು ಹುಡುಕಾಟ ನಡೆಸುತ್ತಿದ್ದಾರೆ. ಇತ್ತ ಇಂದು ಸರ್ವೆ ನಡೆಸುತ್ತಿದ್ದಂತೆ, ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯ ತೆರವು ಕಾರ್ಯಾಚರಣೆಯನ್ನು ಏಕಕಾಲಕ್ಕೆ ನಡೆಸಲಾಯಿತು.
ಅಧಿಕಾರಿಗಳು ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಅಮರಾವತಿ ಚಂದ್ರಶೇಖರ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು. ಅಂತಿಮ ವರದಿ ಬಂದ ನಂತರ ನಾಲಾ ಜಾಗ ಒತ್ತುವರಿಯಾಗಿದ್ದರೆ ಇನ್ನೂ ಉದ್ಘಾಟನೆಗೊಳ್ಳದ ಕೋಟ್ಯಂತರ ರೂಪಾಯಿ ವೆಚ್ಚದ ಹೊಟೇಲ್ ತೆರವು ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ.