ಮಂಡ್ಯ: ಉಪಚುನಾವಣೆಗೂ ಮುನ್ನವೇ ಜೆಡಿಎಸ್ ಟಿಕೆಟ್ ಆಕಾಂಕ್ಷಿ ತನ್ನ ಫೇಸ್ಬುಕ್ ಖಾತೆಯ ಹೆಸರನ್ನು ಬದಲಿಸಿ ಶಾಸಕ ಎಂದು ಬರೆದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಚುನಾವಣೆಗೂ ಮೊದಲೇ ಶಾಸಕಾಗಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಅಲ್ಲದೆ, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಉಪಚುನಾವಣೆಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ಇದೆ. ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಎಲ್.ದೇವರಾಜು ಅವರು ಫೇಸ್ಬುಕ್ ಖಾತೆಯಲ್ಲಿ ಶಾಸಕರು ಎಂದು ನಮೂದಿಸಿದ್ದು ಚರ್ಚೆಗೆ ಕಾರಣವಾಗಿದೆ.
ಜೆಡಿಎಸ್ನಲ್ಲಿ 6ಕ್ಕೂ ಹೆಚ್ಚು ಜನರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ ದೇವರಾಜು ಅವರು ಬರೆದುಕೊಂಡಿರುವುದು ನೋಡಿ ಈಗಾಗಲೇ ಜೆಡಿಎಸ್ ಗೆದ್ದಾಗಿದೆ ಎಂಬಂತಿದೆ.
ಅನರ್ಹ ಶಾಸಕರ ಪ್ರಕರಣ ಕುರಿತು ತೀರ್ಪು ಬರದೆ ಹೀಗೆ ಬರೆದು ಹಾಕಿರುವುದು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲೆಸಿದಂತೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬಂದಿದೆ. ಅವರ ಬೆಂಬಲಿಗರು ಈ ಖಾತೆಯನ್ನು ತೆರೆದಿದ್ದಾರೆ ಎನ್ನಲಾಗ್ತಿದೆ.