ಮಂಡ್ಯ: ಜೆಡಿಎಸ್ ಶಾಸಕ ನಾರಾಯಣಗೌಡ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಮತ್ತೆ ಮಂಡ್ಯ ಲೋಕ ಸಮರದ ಫಲಿತಾಂಶ ರಿಪೀಟ್ ಆಗಲಿದೆ. ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಎದುರಿಗೆ ನಿಲ್ಲಿಸಿ ಸೋಲಿಸುತ್ತೇವೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಚಂದ್ರಶೇಖರ್, ಉಪ ಚುನಾವಣೆ ಸಂಬಂಧ ದೋಸ್ತಿ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದು, ಅವರು ಬೇಕಾದರೆ ಹಾಸನಕ್ಕೆ ಹೋಗಿ ಸ್ಪರ್ಧೆ ಮಾಡಲಿ ಎಂದಿದ್ದಾರೆ. ಶಾಸಕ ಸ್ಥಾನಕ್ಕೆ ಕೆ.ಆರ್.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ರಾಜೀನಾಮೆ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ ಅವರು, ಕುಣಿಯಲಾರದವರು ನೆಲ ಡೊಂಕು ಎಂಬಂತೆ ನಾರಾಯಣಗೌಡ ಮಾತನಾಡ್ತಿದ್ದಾನೆ. ಕೆ.ಆರ್.ಪೇಟೆ ಅಭಿವೃದ್ಧಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ಶಾಸಕರ ಹೇಳಿಕೆಗೆ ಚಂದ್ರಶೇಖರ್ ತಿರುಗೇಟು ನೀಡಿದರು.
ಕೆ.ಸಿ.ನಾರಾಯಣಗೌಡ ಬಿಜೆಪಿಗೆ ಸೇಲ್ ಆಗಿದ್ದಾನೆ. ಕುಮಾರಸ್ವಾಮಿ ಹಾಗೂ ಬಿಜೆಪಿ ಅವ್ರ ಹತ್ರ ಹಣ ಮಾಡಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾನೆ. ಆತ ಮತ್ತೆ ರಾಜಕೀಯಕ್ಕೆ ಬರಲ್ಲ. ಮುಂಬೈನಲ್ಲೇ ಸೆಟಲ್ ಆಗ್ತಾನೆ ಎಂದು ಭವಿಷ್ಯ ನುಡಿದರು. ಕುಮಾರಸ್ವಾಮಿ ತಮ್ಮ ಪಕ್ಷದಲ್ಲಿ 125 ಶಾಸಕರು ಇರೋ ಹಾಗೆ ಸರ್ಕಾರ ನಡೆಸಲು ಮುಂದಾಗಿದ್ದು ತಪ್ಪು. ಹೆಚ್ಚು ಶಾಸಕರಿರುವ ಕಾಂಗ್ರೆಸ್ ಪಕ್ಷದ ಮಾತನ್ನು ಕೇಳದೇ ಆಡಳಿತ ನಡೆಸಿದ್ದು ನಮ್ಮ ಶಾಸಕರ ರಾಜೀನಾಮೆಗೆ ಕಾರಣ. ಮೈತ್ರಿ ಸರ್ಕಾರ ಅಂತ್ಯ ಆಗೋದು ಪಕ್ಕಾ ಎಂದ್ರು.