ಮಂಡ್ಯ: ಬಿಜೆಪಿಗೆ ಹೋಗುವ ಆಸೆ ನನಗೂ ಇತ್ತು, ಆದರೆ ಹೋಗಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯಗೂ ಆಹ್ವಾನ ನೀಡಲಾಗಿತ್ತು ಎಂದು ಹೇಳಿಕೆ ನೀಡುವ ಮೂಲಕ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅಚ್ಚರಿ ಮೂಡಿಸಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಬೀಳುವ ಸಂದರ್ಭದಲ್ಲಿ ಅನರ್ಹ ಶಾಸಕರ ಜೊತೆ ನಾನೂ ಹೋಗಿ ಬಿಜೆಪಿ ಸೇರಬೇಕು ಎಂದೆನಿಸಿತ್ತು. ಆದ್ರೆ ಇಂದಿನ ಅನರ್ಹ ಶಾಸಕರ ಪರಿಸ್ಥಿತಿ ನೋಡಿದ್ರೆ ನಾವು ಹೋಗದೆ ಇದ್ದಿದ್ದೇ ಸರಿ ಅನ್ಸುತ್ತೆ. ನನಗೆ 2008 ರಿಂದ ಇಲ್ಲಿಯವರೆಗೂ ಬಿಜೆಪಿಗೆ ಬರುವಂತೆ ಆಫರ್ ಇತ್ತು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯಗೂ ಕೂಡ ಬಿಜೆಪಿಗೆ ಸೇರಲು ಆಫರ್ ನೀಡಲಾಗಿತ್ತು ಎಂದರು.
ಬಿಎಸ್ವೈ ಕಟ್ಟಾ ಬೆಂಬಲಿಗರೇ ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ:
ಇತ್ತ ಮತ್ತೋರ್ವ ಜೆಡಿಎಸ್ ಶಾಸಕ, ಮಾಜಿ ಸಚಿವ ಪುಟ್ಟರಾಜು ಬಿಜೆಪಿ ಸರ್ಕಾರದ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಸಚಿವ ಸ್ಥಾನ ವಂಚಿತರ ವೇಗ ನೋಡಿದರೆ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ ಅನ್ನಿಸುತ್ತಿದೆ. ಸಿಎಂ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರೇ ಸರ್ಕಾರ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ. ನಾವೇನೂ ಬಿಜೆಪಿ ನಾಯಕರಂತೆ ಆಪರೇಷನ್ ಕೆಲಸಕ್ಕೆ ಕೈ ಹಾಕೋದಿಲ್ಲ. ಆದರೆ ಶಾಸಕರ ಸ್ಪೀಡ್ ನೋಡಿದರೆ ಅವರುಗಳೇ ಯಡಿಯೂರಪ್ಪರನ್ನು ಮನೆಗೆ ಕಳುಹಿಸಲು ರೆಡಿಯಾಗಿದ್ದಾರೆ ಅನಿಸುತ್ತೆ ಎಂದರು.