ಮಂಡ್ಯ: ಗಂಡ-ಹೆಂಡ್ತಿಯ ಜಗಳ ಉಂಡು ಮಲಗುವವರೆಗೆ ಎಂಬುದು ಗಾದೆಮಾತು. ಆದ್ರೆ ಇಲ್ಲೊಬ್ಬ ಗಂಡ ಕುಡಿದ ಮತ್ತಿನಲ್ಲಿ ಮಗಳೆದುರೇ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಘಟನೆ ಜರುಗಿದೆ. ಮೃತ ಮಹಿಳೆಯನ್ನು ಅರಳಕುಪ್ಪೆ ಗ್ರಾಮದ ಶೋಭಾ (43) ಎಂದು ಗುರುತಿಸಲಾಗಿದೆ. ಮನೋಹರ್ (48) ಪತ್ನಿಯನ್ನು ಕೊಲೆಗೈದ ವ್ಯಕ್ತಿ.
ಪೊಲೀಸ್ ತನಿಖೆಯ ಪ್ರಕಾರ, 23 ವರ್ಷಗಳ ಹಿಂದೆ ಒಂದೇ ಗ್ರಾಮದ ಶೋಭಾ ಹಾಗೂ ಮನೋಹರ್ ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದರು. ಇತ್ತೀಚೆಗೆ ಮನೋಹರ್ ಕೆಲಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದನು. ಇಬ್ಬರು ಮಕ್ಕಳಿದ್ದರೂ ಬೇಜವಾಬ್ದಾರಿಯಿಂದ ಕಂಠಪೂರ್ತಿ ಕುಡಿದು ಪ್ರತಿನಿತ್ಯ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದನು. ಹೀಗೆ ಮಂಗಳವಾರವೂ ಬೈಕ್ ಸಾಲದ ವಿಚಾರಕ್ಕೆ ಮನೆಯಲ್ಲಿ ಕಿರಿಕ್ ಆಗಿದೆ.
ಮಗನಿಗೆ ಬೈಕ್ ಕೊಡಿಸಿದ್ದ ತಾಯಿ: ಮಗನಿಗೆ ಸಾಲದ ಕಂತಿನಲ್ಲಿ ತಾಯಿ ಶೋಭಾ ಬೈಕ್ ಕೊಡಿಸಿದ್ದರು. ಕಳೆದ 3 ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಮನೋಹರ್‌ಗೆ ಕರೆ ಮಾಡಿ ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿಯವರು ಕೇಳುತ್ತಿದ್ದರು. ಅಷ್ಟೇ ಅಲ್ಲ, ಮನೆ ಬಳಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ ಹಣ ಕಟ್ಟುವಂತೆ ಒತ್ತಡ ಹಾಕುತ್ತಿದ್ದರು. ಈ ವಿಚಾರಕ್ಕೆ ಕುಪಿತಗೊಂಡ ಮನೋಹರ್ ಪತ್ನಿಯೊಂದಿಗೆ ಜಗಳವಾಡಿದ್ದನು.
ಮಂಗಳವಾರ ಕುಡಿದ ಮತ್ತಿನಲ್ಲಿದ್ದ ಮನೋಹರ ಪತ್ನಿಗೆ ಮನಬಂದಂತೆ ಬೈದು ಗಲಾಟೆ ಮಾಡಿದ್ದಾನೆ. ಪರಸ್ಪರ ಬೈದಾಟದಿಂದ ಜಗಳ ತಾರಕಕ್ಕೇರಿತ್ತು. ಈ ವೇಳೆ ಕುಡುಗೋಲಿನಿಂದ ಮಗಳ ಕಣ್ಣೆದುರೇ ಶೋಭಾಳ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿದ್ದ ಶೋಭಾ ಸಹಾಯಕ್ಕೆ ಸ್ಥಳೀಯರು ಯಾರೂ ಮುಂದೆ ಬಂದಿಲ್ಲ. "ನಾನು ಎಷ್ಟೇ ಕೇಳಿಕೊಂಡರೂ ಸಹ ಗಂಭೀರವಾಗಿ ಗಾಯಗೊಂಡಿದ್ದ ನನ್ನ ತಾಯಿ ಶೋಭಾ ಸಹಾಯಕ್ಕೆ ಯಾರೂ ಬರಲಿಲ್ಲ" ಅನ್ನೋದು ಮೃತ ಶೋಭಾ ಮಗಳ ಮಾತು. ಅಷ್ಟೇ ಅಲ್ಲ, ಸಕಾಲಕ್ಕೆ ಆಂಬ್ಯುಲೆನ್ಸ್ ಕೂಡ ಬಾರದೇ ಶೋಭಾ ಸಾವನ್ನಪ್ಪಿದ್ದಾರೆ ಎಂಬ ಆರೋಪವಿದೆ.
'ತಂದೆಗೆ ಕಠಿಣ ಶಿಕ್ಷೆಯಾಗಲಿ..': ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳದಿಂದ ಪರಾರಿಯಾಗಿದ್ದ ಮನೋಹರ್‌ನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. "ತಂದೆಗೆ ಕಠಿಣ ಶಿಕ್ಷೆ ನೀಡಿ. ಸಾಯೋವರೆಗೂ ಜೈಲಲ್ಲೇ ಕೊಳೆಯುವಂತೆ ಮಾಡಿ" ಎಂದು ಪುತ್ರಿ ಅನುಷಾ ಪೊಲೀಸರಿಗೆ ಮನವಿ ಮಾಡಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ ಗೆ ದಿನಗಣನೆ: ಹಿರಿಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಬಂತು ಬೇಡಿಕೆ..!