ಮಂಡ್ಯ: ರಾಜ್ಯದಲ್ಲಿ ಧರ್ಮ ಸಂಘರ್ಷ ಆಶಾಂತಿಯನ್ನು ಸೃಷ್ಟಿ ಮಾಡಿದ್ದು ಸುಳ್ಳಲ್ಲ. ಇಂಥಹ ಹೊತ್ತಿನಲ್ಲಿ ಮಂಡ್ಯ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಹಿಂದೂ ದಂಪತಿ ಆಶ್ರಯ ನೀಡಿ ಸೌಹಾರ್ದತೆ ಮೆರೆದಿದ್ದಾರೆ.
ಮುಸ್ಲಿಂ ಕುಟುಂಬಗಳಿಗೆ ಆಶ್ರಯ: ಜಿಲ್ಲಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಅಧಿಕ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಉಂಟಾಗಿದೆ. ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾಗಿರುವ ನಗರದ ಬೀಡಿ ಕಾರ್ಮಿಕರ ಕಾಲೋನಿಯ ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಅದೇ ಬಡಾವಣೆಯ ಆಶಾ-ಸಿದ್ದರಾಮು ದಂಪತಿ ಐದು ದಿನಗಳಿಂದ ಆಶ್ರಯ ನೀಡಿದ್ದಾರೆ. ಇರುವ ಸಣ್ಣ ಮನೆಯಲ್ಲೇ ಅವರಿಗೆ ಆಶ್ರಯ ನೀಡಿ ಕಾಳಜಿ ವಹಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ಕುಟುಂಬಗಳಿರುವ ಈ ಕಾಲೋನಿಯಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು ಮಂದಿ ಇದ್ದಾರೆ. ಮಳೆ ನೀರಿನ ಜೊತೆ ವಿ.ಸಿ ನಾಲೆ ನೀರು ಕೂಡ ನುಗ್ಗಿದ್ದು, ಇಡೀ ಬಡಾವಣೆ ಜಲಾವೃತವಾಗಿದೆ. ಆಶ್ರಯ ಯೋಜನೆಯಡಿ ರೈತ ದಂಪತಿ( ಆಶಾ-ಸಿದ್ದರಾಮು) ನಿರ್ಮಿಸಿಕೊಂಡಿರುವ ಹೊಸ ಮನೆ ಎತ್ತರದ ಪ್ರದೇಶದಲ್ಲಿರುವುದರಿಂದ ಅವರ ಮನೆಗೆ ನೀರು ನುಗ್ಗಿಲ್ಲ.
ಇದನ್ನೂ ಓದಿ: ಯಾದಗಿರಿ ಜಿಲ್ಲೆಯಲ್ಲಿ ಮಳೆ ಅಬ್ಬರ : ಹೊಲಗಳಿಗೆ ನೀರು ನುಗ್ಗಿ ಬೆಳೆ ನಾಶ, ಮನೆ ಗೋಡೆಗಳು ಕುಸಿತ
ಆದರೆ ಸುತ್ತಲಿನ ಮನೆಗಳಿಗೆ ನೀರು ನುಗ್ಗಿದ್ದು, ದವಸ, ಧಾನ್ಯ, ಬಟ್ಟೆ ಬರೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳ ಮಹಿಳೆಯರು ಹಾಗೂ ಮಕ್ಕಳನ್ನು ಈ ದಂಪತಿ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದಾರೆ. ಮುಸ್ಲಿಂ ಮಹಿಳೆಯರು ಅಲ್ಲಿಯೇ ಒಟ್ಟಾಗಿ ಅಡುಗೆ ಮಾಡಿಕೊಳ್ಳುತ್ತಿದ್ದಾರೆ. ದಂಪತಿಯ ಮಗ ಚೇತನ್‌ಗೌಡ ಅವರು ಮಕ್ಕಳಿಗೆ ನಿತ್ಯ ಹಾಲು, ಔಷಧಿ, ಕ್ಯಾನ್‌ನಿಂದ ಶುದ್ಧ ಕುಡಿಯುವ ನೀರು ತಂದು ಕೊಡುತ್ತಿದ್ದಾರೆ.
ದಯವೇ ಧರ್ಮದ ಮೂಲವಯ್ಯ, ದಯಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ, ದಯವಿಲ್ಲದ ಧರ್ಮ ಯಾವುದಯ್ಯ, ಕೂಡಲಸಂಗಮದೇವ ಎಂಬ ಬಸವಣ್ಣನವರ ವಚನದಂತೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸ್ಪಂದಿಸಿರುವ ಮಂಡ್ಯದ ಈ ದಂಪತಿಯ ಮಾನವೀಯತೆಗೆ ಸಲಾಂ ಹೇಳಲೇಬೇಕು.